ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತ್ತಿದೆ.
ಪ್ರಕೃತಿ ಮಗ್ಗಲು ಬದಲಾಯಿಸುವ 'ಯುಗಾದಿ'

ಹಾವೇರಿ: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತ್ತಿದೆ… ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಬರೆದ ಈ ಹಾಡು ಯುಗಾದಿ ಬಂದಾಗಲೆಲ್ಲಾ ಕೇಳಿಬರುತ್ತದೆ. ಯುಗಾದಿಯನ್ನು ಬೇಂದ್ರೆ ಈ ರೀತಿ ಬಣ್ಣಿಸಿದರೆ ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಯುಗಕ್ಕೆ ಆದಿ ಯುಗಾದಿಯೆಂದರು. ಹಿಂದೂಗಳ ವರ್ಷದ ಮೊದಲ ಹಬ್ಬ ಯುಗಾದಿ ಸಂಭ್ರಮ ಇಂದು ಎಲ್ಲೆಡೆ ಮನೆ ಮಾಡಿದೆ.
ಯಾವುದು ಏನೇ ಆಗಲಿ ಪ್ರಕೃತಿ ಮಾತ್ರ ತನ್ನ ಕೆಲಸ ನಿರಂತರ ಎನ್ನುತ್ತೆ. ತನ್ನಷ್ಟಕ್ಕೆ ತಾನೇ ಎಲೆ ಚಿಗುರುತ್ತೆ. ಹೊಸ ಚಿಗುರು ಬಿಟ್ಟು ಆಕರ್ಷಿಸುತ್ತೆ. ಕೋಗಿಲೆಗಳ ಕುಹೂ ಕುಹೂ ಕೇಳಲಾರಂಭಿಸುತ್ತೆ. ಪ್ರಕೃತಿ ಹೊಸತನ್ನ ಹೊದ್ದು ನಿಲ್ಲುತ್ತೆ. ಯುಗಾದಿಯ ಮೂಲಕ ಹೊಸ ವರ್ಷಕ್ಕೆ ಪ್ರಕೃತಿಮಾತೆ ಸ್ವಾಗತ ನೀಡುತ್ತಾಳೆ. ಮಾವಿನಮರಗಳು ಮಾವಿನಫಸಲು ಹೊತ್ತು ಗಾಳಿಗೆ ಹೊಯ್ದಾಡುವುದನ್ನು ನೋಡುವುದೇ ಕಣ್ಣಿಗೆ ಮುದ ನೀಡುತ್ತೆ. ಹೊಸ ಚಿಗುರು ಕವಿ ಮನಸ್ಸುಗಳಲ್ಲಿ ಕವಿತ್ವ ಹುಟ್ಟುಹಾಕುತ್ತದೆ.
ವಸಂತ ಋತುವಿನ ಆಗಮನ ಹೊಸತನ್ನ ಮೂಡಿಸುತ್ತದೆ. ಪ್ರಕೃತಿ ಮಾತೆ ಒಂದು ವರ್ಷದ ಮಗ್ಗಲು ಬದಲಾಯಿಸುತ್ತಾಳೆ. ಯುಗಾದಿ ಕೇವಲ ಹೊಸತಕ್ಕೆ ಮಾತ್ರವಲ್ಲ. ಸಿಹಿ ಮತ್ತು ಕಹಿಯನ್ನು ಸಮಾನವಾಗಿ ನೋಡಬೇಕು ಎನ್ನುವ ಮನೋಭಾವನೆ ಮೂಡಿಸುತ್ತೆ. ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ನೋಡಬೇಕು. ಸುಖ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೆ ಎರಡು ಸಮಾನವಾಗಿ ನೋಡಬೇಕು. ಈ ಹಿನ್ನೆಲೆಯಲ್ಲಿ ಬೇವು ಬೆಲ್ಲವನ್ನು ಯುಗಾದಿಯಂದು ಸೇವಿಸಲಾಗುತ್ತದೆ.ಯುಗಾದಿಯ ಮುಂದಿನ ದಿನಗಳಲ್ಲಿ ಸಿಹಿದಿನಗಳು ಬರಲಿ ಎಂದು ಸಾಹಿತಿಗಳು ಆಶಿಸಿದ್ದಾರೆ. ಬ್ರಹ್ಮ ಬ್ರಹ್ಮಾಂಡ ಸೃಷ್ಟಿಸಿದ ದಿನ ಇದು ಎನ್ನುವ ಉಲ್ಲೇಖ ಪುರಾಣಗಳಲ್ಲಿ ಉಲ್ಲೇಖವಿದೆ. ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್ ಬದಲಾಯಿಸುವ ದಿನವಲ್ಲ ಬದಲಿಗೆ ಪ್ರಕೃತಿಮಾತೆ ಹೊಸದಾಗಿ ಮೈದಳೆಯುವ ಸೊಬಗು ಸಂಭ್ರಮವನ್ನು ಆನಂದಿಸಬೇಕು ಅಂತಾರೆ ಬಂಡಾಯ ಸಾಹಿತಿ ಸತೀಶ್ ಕುಲಕರ್ಣಿ ಮತ್ತು ಗಾಯಕಿ ಭಾರತಿ ಯಾವಗಲ್.