
ಇಂದು ಬೆಳಗ್ಗೆ ಏಳು ಗಂಟೆ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯ ಕೊಂಚ ಬಿಡುವು ಕೊಟ್ಟಿದ್ದಾನೆ. ಹಾಗಂತ ಮಳೆರಾಯನ ಆರ್ಭಟ ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಇಂದು (ಅ.21) ಬೆಳಗ್ಗೆ ಎಚ್ಚರಿಕೆ ನೀಡಿದೆ.
ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಹಾಗೂ ಸಣ್ಣಪುಟ್ಟ ಸಂಚಾರ ದಟ್ಟಣೆ ಉಂಟಾಗಲಿದೆ. ದುರ್ಬಲ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಿಳಿಸಿದೆ.
ಭಾರಿ ಮಳೆ ಕಾರಣ ಮನೆಯೊಳಗೆ ಇರಿ, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಮತ್ತು ಸಾಧ್ಯವಾದರೆ ಹೊರಗಿನ ಪ್ರಯಾಣವನ್ನು ತಪ್ಪಿಸಿ, ಸುರಕ್ಷಿತ ಆಶ್ರಯವನ್ನು ತೆಗೆದುಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಆಶ್ರಯ ಪಡೆಯಬೇಡಿ. ಅಲ್ಲದೆ, ಕಾಂಕ್ರೀಟ್ ಗೋಡೆಗಳಿಗೆ ಒರಗಬೇಡಿ. ನಿಮ್ಮ ಮನೆಯ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಅನ್‌ಪ್ಲಗ್ ಮಾಡಿ. ನೀವು ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಹವಾಮಾನ ಇಲಾಖೆ ಸಲಹೆಗಳನ್ನು ನೀಡಿದೆ.