ಬೆಳಗಾವಿಯಲ್ಲಿ ಅಧಿಕಾರಿಗಳ ಹೆಸರಿನಲ್ಲೇ ಮಹಾದೋಖ: ಇಬ್ಬರು ಅರೆಸ್ಟ್
ಬೆಳಗಾವಿಯಲ್ಲಿ ಅಧಿಕಾರಿಗಳ ಹೆಸರಿನಲ್ಲೇ ಮಹಾದೋಖ: ಇಬ್ಬರು ಅರೆಸ್ಟ್

ಬೆಳಗಾವಿ, ನವೆಂಬರ್ 15: ಕರ್ನಾಟಕದ ಐಎಎಸ್, ಐಪಿಎಸ್ ಅಧಿಕಾರಿಗಳ ಹೆಸರು ಮತ್ತು ಭಾವಚಿತ್ರ ಬಳಸಿ ಫೇಸ್ಬುಕ್ ಮೂಲಕ ಹಣ ದೋಚುತ್ತಿದ್ದ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಮೂಲದ ಇಬ್ಬರು ಸೈಬರ್ ವಂಚಕರನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ ಚತರಪುರ ಜಿಲ್ಲೆಯ ಚಾಂದಲಾದ ವಿಜಯಕುಮಾರ ಕಿಶೋರಿಲಾಲ ತಿವಾರಿ (46) ಹಾಗೂ ರಾಜಸ್ಥಾನದ ಅಲವಾರಾ ಜಿಲ್ಲೆಯ ಕೋಟಾ ಖುರ್ದ ಗ್ರಾಮದ ಅರ್ಬಾಜ್ ಹಸಮಖಾನ್ (19) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಮಾಹಿತಿ ತಂತ್ರಜ್ಞಾನ ಮತ್ತು ಬಿಎನ್ಎಸ್ ಕಾಯ್ದೆಗಳ ಅಡಿ ಬಂಧಿಸಲಾಗಿದೆ.
ವಿಜಯ ಕುಮಾರ ತಿವಾರಿ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಹೆಸರಿನಲ್ಲಿ ಫೇಸಬುಕ್ ಖಾತೆ ತೆರೆದು ಜನರನ್ನು ಹಣಕ್ಕಾಗಿ ವಂಚಿಸುತ್ತಿದ್ದರೆ ಇನ್ನೊಬ್ಬ ಆರೋಪಿ ಅರ್ಬಾಜ್ ಹಸಮಖಾನ್ ಎಂಬಾತ ಎಸ್ಪಿ ಡಾ. ಭೀಮಾಶಂಕರ ಗುಳೇದ, ಬಿ.ಎಸ್ ನೇಮಗೌಡ, ಬಾಲದಂಡಿ ಹಾಗೂ ಐಎಎಸ್ ಅಧಿಕಾರಿಗಳಾದ ಅನುಕುಮಾರಿ ಹಾಗೂ ಎಂ. ಅರುಣಾ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು ವಂಚಿಸುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಬೆಳಗಾವಿ ಸಿಇಎನ್ ಠಾಣೆಯಲ್ಲಿ ಸಾಲು ಸಾಲು ಪ್ರಕರಣ ದಾಖಲಾಗಿತ್ತು. ಕೂಡಲೇ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತೀವ್ರ ತನಿಖೆ ನಡೆಸಿ ಮಧ್ಯಪ್ರದೇಶ ಮೂಲದ ಇಬ್ಬರು ಸೈಬರ್ ವಂಚಕರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ವಂಚನೆಯ ಹಣದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಆರೋಪಿಗಳು ಅಧಿಕಾರಿಗಳ ಹೆಸರಿನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ತೆರೆದು ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಮೊದಲು ಚಾಟಿಂಗ್ ಮಾಡಿ ನಂಬಿಸಿ ಹಣ ಲಪಟಾಯಿಸುತ್ತಿದ್ದರು. ಸದ್ಯ ಸೈಬರ್ ವಂಚಕರನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಪ್ರಕರಣದ ಬಗ್ಗೆ ವಿವರಿಸಿದ್ದಾರೆ.