Uncategorized

ಚಿಕ್ಕೋಡಿ | ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಗದಿದ್ದರೂ, ಸೇವೆ ಆರಂಭಿಸಿ ತಿಂಗಳಾಗಿದೆ. ಒಳರೋಗಿಗಳ ವಿಭಾಗ ಕಾರ್ಯಾರಂಭ ಮಾಡಿದ್ದು, ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ.

 

100 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅ.17ರಿಂದ ನ.16ರವರೆಗೆ 35 ಹೆರಿಗೆಯಾಗಿವೆ. ಈ ಪೈಕಿ 12 ಸಿಸೇರಿಯನ್‌ ಹೆರಿಗೆಯಾಗಿವೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಲ್ಲಿ ನಿಯೋಜಿಸಿದ್ದ ಕೆಲವು ಸಿಬ್ಬಂದಿಯನ್ನು ಬೇರೆ ಕೆಲಸಕ್ಕೆ ನಿಯೋಜಿಸಿದೆ. ಇದರಿಂದ ಆಸ್ಪತ್ರೆಯಲ್ಲಿ ತಮಗೆ ಸಮರ್ಪಕವಾಗಿ ಸೇವೆ ಸಿಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಈ ಆಸ್ಪತ್ರೆ ಕಾರ್ಯಾರಂಭ ಮಾಡಿದ ವೇಳೆ, 14 ಶುಶ್ರೂಷಾಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಈ ಪೈಕಿ ನಾಲ್ವರು ಧೀರ್ಘಾವಧಿಗೆ ರಜೆ ಪಡೆದಿದ್ದಾರೆ. ತಲಾ ಒಬ್ಬರು ಸ್ತ್ರೀರೋಗ ತಜ್ಞೆ, ಅರಿವಳಿಕೆ ತಜ್ಞ ಮಾತ್ರ ಸೇವೆಯಲ್ಲಿರುವ ಕಾರಣ, ರೋಗಿಗಳಿಗೆ ತೊಂದರೆಯಾಗುತ್ತಿದೆ.

ನ.15ರಂದು ಹೆರಿಗೆಗಾಗಿ ಇಲ್ಲಿಗೆ ಬಂದಿದ್ದ ಮಹಿಳೆಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇನ್ನೂ ಚಿಕ್ಕೋಡಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಣಂತಿಯೊಬ್ಬರು ಸಾವನ್ನಪ್ಪಿದ್ದಾರೆ.

ಸಿಬ್ಬಂದಿ ಕೊರತೆ ನೀಗಿಸಬೇಕಿದೆ: ಆಸ್ಪತ್ರೆಗೆ ತಲಾ ಒಬ್ಬರು ಸ್ತ್ರೀರೋಗ ತಜ್ಞೆ, ಅರಿವಳಿಕೆ ತಜ್ಞ, ಚಿಕ್ಕಮಕ್ಕಳ ತಜ್ಞ ಬೇಕಿದ್ದಾರೆ. ತ್ವರಿತವಾಗಿ ಅವರನ್ನು ನೇಮಿಸಬೇಕಿದೆ. ಹೆಚ್ಚುವರಿಯಾಗಿ ನಾಲ್ವರು ‘ಡಿ’ ದರ್ಜೆ ನೌಕರರು, ಪ್ರಯೋಗಾಲಯ ತಂತ್ರಜ್ಞ ಸೇರಿದಂತೆ ವಿವಿಧ ಸಿಬ್ಬಂದಿ ನಿಯೋಜಿಸಬೇಕಿದೆ.

ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 14 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನಿಯೋಜನೆ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

Related Articles

Leave a Reply

Your email address will not be published. Required fields are marked *

Back to top button