ರಂಗೋಲಿಗಳಲ್ಲಿ ಅರಳಿದ, ಮೋದಿ, ಅಲ್ಲು ಅರ್ಜುನ್, ಯಶ್.

ಕಾರವಾರ(ಉತ್ತರ ಕನ್ನಡ): ಜಾತ್ರೆ ಅಂದಾಕ್ಷಣ ನಮಗೆ ನೆನಪಾಗೋದು ಅಲ್ಲಿನ ತಿಂಡಿ ತಿನಿಸುಗಳು, ಹೂವು, ಹಣ್ಣು ಕಾಯಿ, ಮಕ್ಕಳ ಆಟದ ಸಾಮಾನುಗಳು. ಆದರೆ, ಕಾರವಾರ ನಗರದಲ್ಲಿ ನಡೆದ ಜಾತ್ರೆಯೊಂದು ನಾವು ಅಂದುಕೊಳ್ಳುವುದಕ್ಕಿಂತ ವಿಭಿನ್ನವಾಗಿತ್ತು
ಜಾತ್ರೆಗೆ ಆಗಮಿಸಿದ ಸಾವಿರಾರು ಜನರು ದೇವರ ದರ್ಶನ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಜಾತ್ರೆ ನಡೆಯುವ ಸ್ಥಳದಲ್ಲಿನ ಮನೆಗಳ ಮುಂದೆ ಹಾಕಿರುವ ರಂಗೋಲಿ ನೋಡುವುದರಲ್ಲಿಯೇ ಮೈಮರೆತಿದ್ದರು. ಈ ಸ್ಪೆಷಲ್ ರಂಗೋಲಿ ಜಾತ್ರೆ ಕುರಿತಾದ ವರದಿ ಇಲ್ಲಿದೆ.
ರಂಗೋಲಿ ಜಾತ್ರೆ ಖ್ಯಾತಿಯ ಕಾರವಾರ ನಗರದ ಮಾರುತಿ ದೇವರ ವಾರ್ಷಿಕೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಜಾತ್ರೆ ನಿಮಿತ್ತ ದೇವಾಲಯ ಸಮೀಪದ ಬೀದಿಗಳಲ್ಲಿ ಪ್ರದಾನಿ ನರೇಂದ್ರ ಮೋದಿ ಹಾಗೂ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್,ಕನ್ನಡದ ಖ್ಯಾತ ನಟ ರಾಕಿಂಗ್ ಸ್ಟಾರ ಯಶ್ ಹಾಗೂ ಮಾಜಿ ಪ್ರಧಾನಿ ದಿವಂಗತ ಡಾ|| ಮನಮೋಹನ ಸಿಂಗ ರವರ ಚಿತ್ತಾಕರ್ಷಕ ರಂಗೋಲಿಗಳು ನೆರೆದವರ ಗಮನ ಸೆಳೆದವು. ಮಾರುತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಗ್ಗೆಯಿಂದ ಕೈಗೊಳ್ಳಲಾಗಿತ್ತು.
ಕಾರವಾರ ಸೇರಿದಂತೆ ವಿವಿಧ ಪ್ರದೇಶದಿಂದ ಸಾರ್ವಜನಿಕರು ಬಂದು ದೇವರ ದರ್ಶನ ಪಡೆದರು. ದೇವಾಲಯವನ್ನು ವಿಧ ವಿಧದ ಹೂವುಗಳಿಂದ ಅಲಂಕರಿಸಲಾಗಿತ್ತು. ಬಗೆ ಬಗೆಯ ದೀಪಾಲಂಕಾರಗಳಿಂದ ದೇವಾಲಯವು ಶೋಭಿಸುತ್ತಿತ್ತು. ಮಾರುತಿಗಲ್ಲಿ, ಬ್ರಾಹ್ಮಣಗಲ್ಲಿ, ಕೋಣೆವಾಡಾ ರಸ್ತೆಗಳಲ್ಲಿ ಪ್ರತಿ ಮನೆ, ಅಂಗಡಿಗಳು ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಕೂಡ ನಡೆಯಿತು.