ಪ್ರಸಿದ್ಧ ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆಯಿತು “ಬ್ರಹ್ಮ ರಥೋತ್ಸವ”.

ದೊಡ್ಡಬಳ್ಳಾಪುರ : ಇಂದು ನಾಡಿನೆಲ್ಲೆಡೆ ಚಂಪಾ ಷಷ್ಠಿ ಹಿನ್ನೆಲೆ ಪ್ರಸಿದ್ಧ ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ಜರುಗಿತು. ರಥವನ್ನು ಎಳೆಯುವಾಗ ಗರುಡ ರಥದ ಸುತ್ತಲೂ ಮೂರು ಸುತ್ತು ಸುತ್ತಿದ್ದು, ಎಲ್ಲರ ಗಮನ ಸೆಳೆಯಿತು.
ಇಂದು ನಾಡಿನೆಲ್ಲೆಡೆ ಚಂಪಾ ಷಷ್ಠಿ ಹಿನ್ನೆಲೆ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದ ಬಳಿ ಬೆಳಗ್ಗೆಯಿಂದಲೂ ಸಾಗರೋಪಾದಿಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಜೊತೆಗೆ ದೇವಾಲಯದ ಆಡಳಿತ ಮಂಡಳಿ ಕೂಡ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಿತ್ತು. ಹಾಗಾಗಿ ಮುಂಜಾನೆ 4 ಗಂಟೆಯ ವೇಳೆಗೆ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು.
ಜೊತೆಗೆ ಪೂಜಾ ಕೈಂಕರ್ಯಗಳು ಸಹ ನೆರವೇರಿದವು. 12 ಗಂಟೆಯ ನಂತರ ರಥಬೀದಿಯಲ್ಲಿ ರಥವನ್ನ ಎಳೆಯಲಾಯಿತು. ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ರಥಕ್ಕೆ ಬಾಳೆಹಣ್ಣನ್ನು ಎಸೆದು ಹರಕೆ ಕಟ್ಟಿಕೊಂಡರು. ದೇವಾಲಯದ ಸುತ್ತಮುತ್ತಲಿನ ನಾಗರ ಕಲ್ಲುಗಳಿಗೆ ಪೂಜೆ, ಅಭಿಷೇಕ ಮಾಡುವ ಮೂಲಕ ಭಕ್ತಾದಿಗಳು ನಾಗದೋಷ ಪರಿಹಾರಕ್ಕೆ ಮುಂದಾದರು.
ಮಧ್ಯಾಹ್ನ 12-10 ರಿಂದ 12-20ಕ್ಕೆ ಶುಭ (ಮೀನ) ಲಗ್ನ ಅಭಿಜಿನ್ ಮುಹೂರ್ತದಲ್ಲಿ ಸುಬ್ರಹ್ಮಣ್ಯಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಇದೇ ಸಮಯಕ್ಕೆ ಗರುಡ ಪಕ್ಷಿ ದೇವಸ್ಥಾನ ಮತ್ತು ರಥವನ್ನ ಪ್ರದಕ್ಷಿಣೆ ಹಾಕಿ ಅಲ್ಲಿಂದ ತೆರಳಿತು. ಅನಂತರ ಭಕ್ತರು ಬಾಳೆಹಣ್ಣು, ದವನ ರಥಕ್ಕೆ ಎಸೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
 
					 
				



