ಬಿ. ಶ್ರೀರಾಮುಲು ಮತ್ತು ಗಾಲಿ ಜನಾರ್ದನ ರೆಡ್ಡಿ ಮಧ್ಯೆ ಭಿನ್ನಾಭಿಪ್ರಾಯ.

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಸಂಘರ್ಷ ಜೋರಾಗಿರುವ ಬೆನ್ನಲ್ಲೇ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಮತ್ತು ಗಾಲಿ ಜನಾರ್ದನ ರೆಡ್ಡಿ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ. ಮೊದಲ ಬಾರಿಗೆ ಜನಾರ್ದನ ರೆಡ್ಡಿ ವಿರುದ್ಧ ಶ್ರೀರಾಮುಲು ಅವರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ.
ಮಂಗಳವಾರ ನಡೆದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಶ್ರೀರಾಮುಲು ಅವರು ಆಕ್ರೋಶಗೊಂಡು ಬಿಜೆಪಿ ತೊರೆಯುವ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲೇ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಅವರು, ನಾನು ಬೇಡವಾದರೆ ಹೇಳಿ ಪಕ್ಷ ಬಿಡುವುದಕ್ಕೂ ಸಿದ್ಧನಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಒಂದು ಕಾಲದ ತಮ್ಮ ಆಪ್ತ ಸ್ನೇಹಿತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ವಿರುದ್ಧವೇ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ‘ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಶ್ರೀರಾಮುಲು ಕೆಲಸ ಮಾಡಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ’ ಎಂದು ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ.
ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ತಾವು ಹೇಳಿದ್ದೇ ನಡೆಯಬೇಕು, ನಾನು ಹೇಳಿದವರೇ ಗೆಲ್ಲಬೇಕು ಎಂದು ಇಲ್ಲಿಂದ ದೆಹಲಿವರೆಗೆ ಸುಳ್ಳು ಹೇಳಿ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ. ನಾನು ಜನಾರ್ದನ ರೆಡ್ಡಿ ವಿರುದ್ಧ ನಾನು ಯಾವತ್ತೂ ನಡೆದುಕೊಂಡಿಲ್ಲ. ಅವರು ಪಕ್ಷಕ್ಕೆ ಮತ್ತೆ ಬರುತ್ತೇನೆ ಎಂದಾಗ, ಕರೆದುಕೊಳ್ಳಲು ನಾನೇ ಹೇಳಿದ್ದೆ. ಆದರೆ, ಈಗ ನನ್ನ ವಿರುದ್ಧವೇ ಅಪಪ್ರಚಾರ ಮಾಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನನ್ನ ರಾಜಕೀಯ ವಿರೋಧಿಗಳ ಜೊತೆ ಕೈ ಜೋಡಿಸಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಆಪ್ತ ಸ್ನೇಹಿತನ ವಿರುದ್ಧವೇ ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ.