
ನವದೆಹಲಿ: ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ಕುರಿತು ಸಿಬಿಐ ತನಿಖೆಗೆ ನೀಡಿದ್ದ ಒಪ್ಪಿಗೆ ಹಿಂದಕ್ಕೆ ತೆಗೆದುಕೊಂಡಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ಡಿಕೆ ಶಿವಕುಮಾರ್ ಅವರ ವಿರುದ್ಧದ ತನಿಖೆಯ ಒಪ್ಪಿಗೆಯನ್ನು ವಾಪಸ್ ಪಡೆದಿದ್ದನ್ನು ಪ್ರಶ್ನಿಸಿದ್ದರ ಹಿಂದೆ ಯಾವ ರಾಜಕೀಯ ದುರುದ್ದೇಶವಿದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪ್ರಶ್ನಿಸಿದೆ.
ಮೇಲ್ಮನವಿ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ರಾಜಕೀಯ ಲಾಭಕ್ಕಾಗಿ ನೀವು ಸುಪ್ರೀಂಕೋರ್ಟ್ ಮುಂದೆ ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಶಾಸಕರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕೆ. ಪರಮೇಶ್ವರ್ ಅವರು, ಇದು ರಾಜಕೀಯ ದ್ವೇಷದ ಪ್ರಕರಣವಲ್ಲ. ರಾಜ್ಯ ಸರ್ಕಾರ ಇನ್ನೂ ತನ್ನ ಪ್ರತಿ ಅಫಿಡವಿಟ್ ಸಲ್ಲಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಡಿಸಿಎಂ ವಿರುದ್ಧದ ಪ್ರಕರಣವನ್ನು ಸರ್ಕಾರವೇ ಹಿಂಪಡೆದಿದೆ ಎಂದು ಹೇಳಿದರು.