ಬೆಳಗಾವಿ

ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ.

ಬೆಳಗಾವಿ: ಜಿಲ್ಲೆಯ ರಾಜಕಾರಣವನ್ನು ಅಲ್ಲಾಡಿಸುವ ಮಟ್ಟದಲ್ಲಿದ್ದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಕತ್ತಿ ಕುಟುಂಬದ ಹಿಡಿತದಿಂದ ಮುಕ್ತವಾಗಿದ್ದು, ಇದೀಗ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ನಿಯಂತ್ರಣಕ್ಕೆ ಬಂದಿದೆ.

ಕಳೆದ ಲೋಕಸಭಾ ಚುನಾವಣೆಯ ಒಳ ರಾಜಕಾರಣದ ನಂತರದ ಬೆಳವಣಿಗೆಯಲ್ಲಿ ಕತ್ತಿ ಕುಟುಂಬ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮತ್ತು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಎರಡರ ಮೇಲಿನ ಹಿಡಿತವನ್ನು ಕಳೆದುಕೊಂಡಿದೆ.ಲೋಕಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ್ದಾರೆ ಎನ್ನುವ ಸೇಡಿನ ಮೇಲೆ ಡಿಸಿಸಿ ಬ್ಯಾಂಕ್ ಅಧ್ಯಕ್ಷಸ್ಥಾನದಿಂದ ರಮೇಶ ಕತ್ತಿಯನ್ನು ಕೆಳಗಿಳಿಸಲು ಯಶಸ್ವಿಯಾಗಿದ್ದ ಅಣ್ಣಾ ಸಾಹೇಬ ಜೊಲ್ಲೆ ಇದೀಗ ಮತ್ತೊಂದು ಸಹಕಾರಿ ಸಂಸ್ಥೆಯ ಮೇಲೂ ಹಿಡಿತ ಸಾಧಿಸಿದ್ದಾರೆ.

ಸಹಕಾರಿ ಸಕ್ಕರೆ ಕಾರ್ಖಾನೆ ನಷ್ಟದಲ್ಲಿದೆ ಎಂದು ತೋರಿಸಿ ಖಾಸಗಿ ವ್ಯಕ್ತಿಗಳಿಗೆ ಲೀಸ್ ಮೇಲೆ ನೀಡಲು ಮುಂದಾಗಿದ್ದ ಸುದ್ದಿ ತಿಳಿದ ಅಣ್ಣಾ ಸಾಹೇಬ ಜೊಲ್ಲೆ, ತಮ್ಮ ಬೀರೇಶ್ವರ ಬ್ಯಾಂಕ್ ನಿಂದ ಆರ್ಥಿಕ ನೆರವು ನೀಡಿ ಸಹಕಾರಿ ಕ್ಷೇತ್ರದಲ್ಲೇ ಕಾರ್ಖಾನೆಯನ್ನು ಉಳಿಸಲು ಯಶಸ್ವಿಯಾಗಿದ್ದಾರೆ. ಜೊಲ್ಲೆಯವರು ಬಹುತೇಕ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾರ್ಖಾನೆಯ ಅಧ್ಯಕ್ಷಸ್ಥಾನದಿಂದ ಶಾಸಕ ನಿಖಿಲ್ ಕತ್ತಿ ಹಿಂದೆ ಸರಿದಿದ್ದರು.

ಇದೀಗ ಬಸವರಾಜ ಕಲ್ಲಟ್ಟಿ ಅಧ್ಯಕ್ಷರಾಗಿ ಮತ್ತು ಅಶೋಕ ಪಟ್ಟಣ ಶೆಟ್ಟಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಅಣ್ಣಾ ಸಾಹೇಬ ಜೊಲ್ಲೆ ಉಪಸ್ಥಿತಿಯಲ್ಲಿ ಮಂಗಳವಾರ ಕಾರ್ಖಾನೆಯ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ನಡೆಯಿತು.ಈ ಎಲ್ಲ ಬೆಳವಣಿಗೆಗಳಿಂದಾಗಿ ಜಿಲ್ಲಾ ರಾಜಕಾರಣ ಮಹತ್ವದ ತಿರುವು ಪಡೆದುಕೊಂಡಂತಾಗಿದೆ.

 

Related Articles

Leave a Reply

Your email address will not be published. Required fields are marked *

Back to top button