ಪುಸ್ತಕ ಹಿಡಿಸದಿದ್ದರೆ ಹಣವನ್ನೆ ಹಿಂದಿರುಗಿಸುತ್ತೇನೆ ಎಂದು ಬರೆಯುವುದಕ್ಕೂ ಗಂಡೆದೆ ಬೇಕು.

ಪುಸ್ತಕ ಹಿಡಿಸದಿದ್ದರೆ ಹಣವನ್ನೆ ಹಿಂದಿರುಗಿಸುತ್ತೇನೆ ಎಂದು ಬರೆಯುವುದಕ್ಕೂ ಗಂಡೆದೆ ಬೇಕು…ಕಾರಣ ಆ ಪುಸ್ತಕದ ಬಗ್ಗೆ ಲೇಖಕರಿಗಿರುವ ದೃಡತೆ ಮತ್ತು ಎಲ್ಲಾ ಓದುಗರಿಗೂ ಈ ಪುಸ್ತಕ ಇಸ್ಟ ಆಗುತ್ತದೆ ಎನ್ನುವ ಆತ್ಮ ವಿಶ್ವಾಸ…ಏಕೆಂದರೆ ಅದರ ಹಿಂದಿರುವುದು ಲೇಖಕರ ಅವಿರತ ಶ್ರಮ ಹಾಗೂ ಸಂಶೋದನೆ……ಅಂತಹ ಒಂದು ಪ್ರಮುಖ ಸಂಶೋದನಾತ್ಮಕವಾದ ಇತಿಹಾಸ ಹಾಗೂ ರೋಚಕತೆಯ ಸಮ್ಮಿಲನವೇ……..ಶ್ರೀ ಸಂತೋಷ್ ಕುಮಾರ್ ಮೆಹಂದಳೇ ಸರ್ ಅವರ ಈ ಪುಸ್ತಕ. ಇದು ಕನ್ನಡದಲ್ಲಿ ಮತ್ತೊಂದು ಬರಲಿಕ್ಕಿಲ್ಲ
ಯಾರೂ ಸಾಧಿಸಲಾಗದ,ಯಾರೂ ಇರಲಾರದ ರೀತಿಯಲ್ಲಿ ಭಯಾನಕವಾಗಿಯೂ ಸಹ್ಯವಲ್ಲದ ಪರಿಸರದಲ್ಲಿ ಸಹನೀಯವಾಗಿರುವವನು ಹಾಗೂ ನಗ್ನನಾಗಿಯೂ ಮೈತುಂಬಾ ಚಿತಾಭಸ್ಮವನ್ನು ಲೇಪಿಸಿಕೊಂಡು ಉದ್ದುದ್ದ ಕೂದಲನ್ನು ಬಿಟ್ಟುಕೊಂಡು, ರುದ್ರಾಕ್ಷಿ ಮಾಲೆಗಳನ್ನು ಕೈಗೆ ಮೈಗೆ ಹಾಕಿಕೊಂಡು, ಕೈಯಲ್ಲೊಂದು ತ್ರಿಶೂಲ, ಆಯುಧವನ್ನು ಹಿಡಿದುಕೊಂಡು ಚಿತ್ರ ವಿಚಿತ್ರವಾಗಿ ಕಾಣುವ ಮನುಷ್ಯರನ್ನು ನಾವುಗಳು ಸುಲಭವಾಗಿ ಅಘೋರಿಗಳು ಎಂದು ಗುರುತಿಸುತ್ತೇವೆ.ಇಂತಹ ಅಘೋರಿಗಳ ಬಗ್ಗೆ ವೈಜ್ಞಾನಿಕವಾಗಿ, ಆಧ್ಯಾತ್ಮಿಕವಾಗಿ ಚರ್ಚಿಸಿ;ತಾರ್ಕಿಕವಾಗಿ ಅಂತ್ಯ ಕೊಟ್ಟಿರುವ ನಿಷಿದ್ಧ ಲೋಕದೊಳಗಿನ ಪಯಣವೇ ಶ್ರೀ ಸಂತೋಷ್ ಕುಮಾರ್ ಮೆಹೆಂದಳೆಯವರ ಅಘೋರಿಗಳ ಲೋಕದಲ್ಲಿ………….
ಪುಸ್ತಕದ ಹೆಸರು :- ಅಘೋರಿಗಳ ಲೋಕದಲ್ಲಿ
ಲೇಖಕರ ಹೆಸರು :- ಸಂತೋಷ್ ಕುಮಾರ್ ಮೆಹೆಂದಳೆ
ಪ್ರಕಾಶನ :- ಅಂಕಿತ ಪುಸ್ತಕ ಪ್ರಕಾಶನ(ಪ್ರಕಾಶ್ ಕಂಬತ್ತಳ್ಳಿ)
ಬೆಲೆ:- 350/- ಮಾತ್ರ
ಅಘೋರಿ ಎಂದರೆ ಅಂಧಕಾರ ರಹಿತ ,ಸರ್ವ ಪ್ರಕಾಶಮಯನಿರ್ಭಯಗಳಿಂದ ಕೂಡಿದವನು ಎಂದರ್ಥ ಇಂತಹ ಅಘೋರಿಗಳು ಸಾಮಾನ್ಯವಾಗಿ ಹಿಮಾಚಲ, ಒಡಿಸ್ಸಾ ವಾರಣಾಸಿ, ಉಜ್ಜಯಿನಿ, ನಾಸಿಕ್,ತ್ರಯಂಬಕೇಶ್ವರ,ಪ್ರಯಾಗ್ ರಾಜ್, ಉತ್ತರ ಖಂಡ, ಬದರಿ ,ಕೇದಾರನಾಥ, ಹಿಮಾಲಯ ತಪ್ಪಲು ಪ್ರದೇಶದಲ್ಲಿ ಕಾಣಸಿಗುತ್ತಾರೆ.ಇಂತಹ ಅಘೋರಿಗಳು ಅಸಂಪ್ರದಾಯಿಕ ಪಥವನ್ನು ಹಿಡಿದು ಹಲವು ರೀತಿಯ ಹೊಸ ವಿಧಿ-ವಿಧಾನಗಳಿಗೆ ಪಕ್ಕಾದವರ ಬಗ್ಗೆ ವರ್ಷಾನುಗಟ್ಟಲೆ ಸಂಶೋಧನೆ ಕೈಗೊಂಡು ಪ್ರಯೋಗಿಕವಾಗಿ ಏನು ನಡೆಯುತ್ತಿದೆ, ನಿಜವೆಷ್ಟು?ಜೊಳ್ಳೆಷ್ಟು?ಎಂಬುದನ್ನು ಓರೆಗೆ ಹಚ್ಚಲು ಕೆಲವು ಪ್ರಯೋಗಗಳಿಗೆ ಲೇಖಕರು ಜ್ವಲಂತ ಸಾಕ್ಷಿಯಾಗಿರುವುದನ್ನು ಕಾಣಬಹುದು.
ಅಘೋರಿಗಳ ಬಗೆಗೆ ಪುಸ್ತಕ ಬರೆಯುವ ಮೊದಲು ಲೇಖಕರಲ್ಲಿ ಕೆಲವೊಂದು ಪ್ರಶ್ನೆಗಳು ,ಗೊಂದಲಗಳು ದ್ವಂದ್ವದ ತಳಹದಿಯ ಮೇಲಿದ್ದು, ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರಾ? ಇಲ್ಲವಾ ? ಎಂಬುದನ್ನು ತಿಳಿಯಲು ಓದುಗರು ಪುಸ್ತಕವನ್ನು
ಓದುವುದೇ ಸೂಕ್ತ. ಆ ಪ್ರಶ್ನೆಗಳಾದರೂ ಏನು ? ಎಂದು ಓದುತ್ತಾ ಹೋದಂತೆ…ಶಿವನ ಮೂರನೇ ಕಣ್ಣಿನಂತೆ ಶಕ್ತಿಯನ್ನು ಈಗಲೂ ಪ್ರವಾಹಿಸಬಲ್ಲವರಿದ್ದಾರಾ?? ……ವರ್ಣಗೋಲ ಎಂದರೇನು ?ವಜ್ರೋಲಿ ವಿದ್ಯೆಯೆಂಬುದಿದೆಯೇ? ಮನ್ಮಥ ರೇಖೆ ಸಿದ್ದಿಸಿದ್ದು ಇದೆಯೇ? ಅಮೃತ ಬಿಂದು ಇಲ್ಲಿಯವರೆಗೂ ಯಾರಿಗದರೂ ಲಭ್ಯವಿದೆಯೇ? ಮಧನರೇಖೆಯನ್ನು ಉದ್ರೇಕಿಸುತ್ತಾ ಹೆಣ್ಣನ್ನು ಸುರತದ ಅಮಲಿನಲ್ಲಿ ಮರಣಕೊಯ್ಯುವ ಅಘೋರಿಗಳು ನಿಜಕ್ಕೂ ಹಾಗೆ ಮಾಡಿದ್ದಾರಾ? ಯಾವ ಹೆಣ್ಣಾದರೂ ಇಹ ಮರೆತು ಅಂಗಾತ ಮಲಗಿ ಸುಖವನ್ನು ಅನುಭವಿಸುತ್ತಲೇ ಕೊನೆಯುಸಿರು ಎಳೆದ್ದದ್ದು ಇದೆಯಾ? ಮುಂತಾದವುಗಳಲ್ಲಿ ಉತ್ತರ ಹುಡುಕುತ್ತಾ ಹೋದ ಲೇಖಕರಿಗೆ ಕಂಡದ್ದನ್ನು ವಸ್ತುನಿಷ್ಠವಾಗಿ ನಿರೂಪಿಸುತ್ತಾ ಸಾಗಿದ್ದಾರೆ.
ಅಘೋರಿಗಳಾದರೂ ನಾಗರೀಕ ಸಮಾಜದ ಮಧ್ಯೆ ಇದ್ದು ಮನುಷ್ಯ ಮಾಂಸ ತಿನ್ನುತ್ತಿದ್ದರೆ, ಮಧ್ಯೆ ರಾತ್ರಿ ಭಜನೆ, ಮಂತ್ರ ಕಲಾಪ, ಶವ ಸಂಭೋಗದಂತಹ ಭೀಭತ್ಸ ಕಾರ್ಯಗಳನ್ನು ಮಾಡುತ್ತಿದ್ದರೆ, ನಾಗರೀಕರೆನಿಸಿಕೊಂಡವರು ಸುಮ್ಮನಿರುತ್ತಾರಾ? ಆದ್ದರಿಂದ ನಾಗರೀಕ ಸಮಾಜದಿಂದ ದೂರವೇ ಉಳಿದು ಬಿಡುತ್ತಾರೆ.
ಅಘೋರಿಗಳು ಶವ ಸಾಧನೆಯಲ್ಲಿ ಸ್ಮಶಾನ ಸಾಧನೆ, ಶಿವ ಸಾಧನೆ, ಮಹಾ ಸಾಧನೆಯಂತಹ ಮೂರು ಹಂತಗಳಲ್ಲಿ ಸಹಸ್ರ ಜೀವ ಬಲಿ,ಶವ ಸಂಭೋಗದಂತಹ ಪ್ರಕ್ರಿಯೆಗಳನ್ನು ಲೇಖಕರು ತುಂಬಾ ನೇರಾನೇರ!! ರಾ…!! ಆಗಿ ನಿರೂಪಿಸುತ್ತಾ ಸಾಗಿದ್ದಾರೆ.ಹಾಗೂ ಅಘೋರಿಗಳು ಸಾಧನೆಯ ಹಾದಿಯಲ್ಲಿ ತಮ್ಮ ಶಿಶ್ನವನ್ನೇ ಬಲಿಕೊಟ್ಟಿರುವುದು ಓದುತ್ತಾ ಹೋದಂತೆ ಮೈಜುಮ್ಮೆನ್ನಿಸದೇ ಇರಲಾರದು……….
ಕುಂಡಲಿನಿ ಶಕ್ತಿ ಮತ್ತು ಮನ್ಮಥರೇಖೆಗಳ ಬಗ್ಗೆ ಒಬ್ಬ ತತ್ವಶಾಸ್ತ್ರಜ್ಞರಾಗಿ, ಧಾರ್ಮಿಕ ಶಾಸ್ತ್ರಜ್ಞರಾಗಿ,ಪಿಸಿಷಿಯನ್ ಆಗಿ ನರರೋಗ ತಜ್ಞರಾಗಿ ವಿಭಿನ್ನ ದೃಷ್ಟಿಕೋನದಿಂದ ಒಳಹೊಕ್ಕು ಬರೆದಿರುವುದು ಲೇಖಕರ ಅಕ್ಷರ ಮಾಂತ್ರಿಕತೆಗೆ ಸಾಕ್ಷಿಯಾಗಿದೆ.
ಅಘೋರನೊಬ್ಬ ಯಾವತ್ತೂ ಕೆಡುಕನ್ನು ಬಯಸುವುದಿಲ್ಲ.ಎನ್ನುವ ಮಹಾಂತ್ ಆದೇಶನಾಥ್ ಸ್ವಾಮಿ
ಮಾತು ಲೇಖಕರು ಕಂಡು ಕೊಂಡ ಸತ್ಯಕ್ಕೆ ಇಂಬುಕೊಡುತ್ತದೆ. ಹಾಗೂ ವರ್ಣಗೋಲದ ಬಗ್ಗೆ ವಿಜಯ್ ಜೀರವರ ಪ್ರಾತ್ಯಕ್ಷಿಕೆ ಲೇಖಕರನ್ನು ಮಂತ್ರ ಮುಗ್ಧರನ್ನಾಗಿಸುವುದು ಸುಳ್ಳಲ್ಲ.
ನಾನಾ ಪಂಥದ ಅಘೋರಿಗಳನ್ನು ನಾನಾ ಅಖಾಡಗಳನ್ನು ಭೇಟಿ ಮಾಡಿ ಸಂದರ್ಶಿಸಿ ನಿರಂತರ ಅಧ್ಯಯನವನ್ನು ನಡೆಸಿ ಹಲವಾರು ಪ್ರಯೋಗಗಳಿಗೆ ಒಳಪಡಿಸಿ ವೈಜ್ಞಾನಿಕ ತಳಹದಿಯ ಮೇಲೆ ತಡಕಾಡಿರುವುದು ಸ್ಪಷ್ಟವಾಗಿದೆ.ಮನುಷ್ಯ ಮಾತ್ರ ಸಹಿಸದ ಭೀಭತ್ಸ ವಾತಾವರಣದಲ್ಲಿ ಗಟ್ಟಿಯಾಗಿ ನಿಂತು ಕಂಡದ್ದನ್ನೆಲ್ಲಾ ಒಪ್ಪದೇ ಸಾಧಕರೊಂದಿಗೆ ವಾದ ಮಾಡಿ ಸತ್ಯವನ್ನು ಓರೆ ಹಚ್ಚುವ ಸಮಯದಲ್ಲಿ ಅವರಿಂದಾಗುವ ದಾಳಿಯಿಂದ ಪಾರಾಗಿ ಬಂದಿರುವುದನ್ನು ಅಲ್ಲಗಳೆಯುವಂತಿಲ್ಲ.
ಒಂದು ಸ್ವಚ್ಛಂದದ ಪ್ರಕೃತಿಯ ರಮಣೀಯ ಸ್ಥಳದಲ್ಲಿ ಕುಳಿತು ರವಿ ಕಾಣದನ್ನು ಕವಿ ಕಂಡನೆಂಬಂತೆ ಕಲ್ಪನಾ ಲೋಕದಲ್ಲಿ ವಿಹರಿಸಿ ಕಾಲ್ಪನಿಕ ಪಾತ್ರಗಳನ್ನು ಕೊಟ್ಟು ಕಾದಂಬರಿ ಬರೆಯುವುದು ಸಾಮಾನ್ಯವಾಗಿ ಬರಹಗಾರರಿಗೆ ಸಿದ್ಧಿಸಿದ ಕಲೆ. ಈ ಪುಸ್ತಕವನ್ನು ಲೇಖಕರ ಪ್ರವಾಸ ಕಥನ ಎನ್ನಬೇಕೋ? ಕಾದಂಬರಿ ಎನ್ನಬೇಕೋ? ಅಥವಾ ಸಂಶೋಧನಾತ್ಮಕ ಗ್ರಂಥ ಎನ್ನಬೇಕೋ? ತಿಳಿಯದೇ ನಾನೂ ಸಹ ಗೊಂದಲದಲ್ಲಿದ್ದೇನೆ.ಏಕೆಂದರೆ ಈ ಗ್ರಂಥದಲ್ಲಿ ಏನಿಲ್ಲ?….. ಎಲ್ಲಾ ಇದೆ.
ಕೊನೆಯದಾಗಿ ಅಘೋರಿಗಳ ಬಗ್ಗೆ ಓದುವಂತಹದು ಏನಿದೆ? ಎಂದು ಸುಮ್ಮನೆ ಕುಳಿತರೆ ನಿಮಗೆ ಯಾವತ್ತಿಗೂ ಆ ಲೋಕದ ರೀತಿ ರಿವಾಜುಗಳು ಬರೀ ಕತೆಯಾಗಿಯೇ ಉಳಿಯುತ್ತವೆಯೇ ವಿನಃ ಆ ನಿಷಿದ್ಧ ಲೋಕದ ಪರಿಚಯವೇ ಆಗುವುದಿಲ್ಲ.ಮತ್ತು ಈ ಪುಸ್ತಕದ ಬಗ್ಗೆ ಆಗಿಲ್ಲ,ಹೀಗಿಲ್ಲ ಎನ್ನುವ ಪ್ರಶ್ನೆ ಮತ್ತು ಸಮಸ್ಯೆಗಳಿದ್ದರೆ
ನೇರವಾಗಿ ಅಘೋರ ಸಾಮ್ರಾಜ್ಯ ಪ್ರವೇಶಿಸಿ ಓದುಗರು ಪರಿಹರಿಸಿಕೊಳ್ಳಬಹುದು. ಎಂದು ಹೇಳುವ ಮೂಲಕ ಇದೇ ಕೊನೆಯಲ್ಲ ಇನ್ನೂ ಹೆಚ್ಚಿನ ವಿಷಯಗಳಿದ್ದರೆ ಅದಕ್ಕೂ ಶರಣು ಎಂದಿರುವುದು ಲೇಖಕರ ಸಂಸ್ಕಾರದ ಪ್ರತಿಬಿಂಬವೇ ಸರಿ……….