ಗದಗ

ಕನಿಷ್ಠ ವೇತನ ಪಾವತಿಸದ ಏಜೆನ್ಸಿ ಪರವಾನಗಿ ರದ್ದುಪಡಿಸಿ : ಸಚಿವ ಸಂತೋಷ ಲಾಡ್ ಸೂಚನೆ

ಗದಗ : ಕಾರ್ಮಿಕರ ಕಲ್ಯಾಣಕ್ಕಾಗಿಯೇ ಕಾರ್ಮಿಕ ಇಲಾಖೆ ಕಾರ‍್ಯನಿರ್ವಹಿಸಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ವಿವಿಧ ಸೌಲಭ್ಯಗಳನ್ನು ಗುತ್ತಿಗೆ ಪಡೆದ ಏಜೆನ್ಸಿಗಳು ಪಾವತಿಸಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ, ನಿಯಮಾನುಸಾರ ವೇತನ ಪಾವತಿಸದ ಏಜೆನ್ಸಿಗಳ ಪರವಾನಗೆಯನ್ನು ರದ್ದು ಪಡಿಸಬೇಕೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೂಚಿಸಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರಮ ವಹಿಸಿ ದುಡಿಯುವ ವರ್ಗಕ್ಕೆ ಸರ್ಕಾರದಿಂದ ಸರಿಯಾಗಿ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು. ವೇತನ ಹಾಗೂ ಪಿ.ಎಫ್. ಪಾವತಿಸದ ಏಜೆನ್ಸಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುವ ಮೂಲಕ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಇಲಾಖಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದರು.

ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ ಪ್ರಕರಣಗಳ ಕುರಿತು ತಪಾಸಣೆ ಮಾಡಿದ ದಾಖಲೆಗಳ ಬಗ್ಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಮುಂದಿನ ದಿನಗಳಲ್ಲಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.

ಪ್ರತಿ ಕೆಡಿಪಿ ಸಭೆಯಲ್ಲಿಯೂ ಬಾಲಕಾರ್ಮಿಕರ ಬಗ್ಗೆ ಪರಿಶೀಲನೆಯಾಗಬೇಕು. ಜೊತೆಗೆ ಬಾಲಕಾರ್ಮಿಕ ಪ್ರಕರಣಗಳ ಉಲ್ಲಂಘನೆ ಕುರಿತಂತೆ ಸಭೆಗಳು ಜರುಗಬೇಕು. ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಜರುಗಿಸಿ ಪ್ರತಿ ತಿಂಗಳು ವರದಿ ಸಲ್ಲಿಸುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತದ ಮುಖ್ಯಸ್ಥರು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದರಿಂದ ಪರಿಣಾಮಕಾರಿ ಜಾಗೃತಿ ಮೂಡಲಿದೆ ಎಂದ ಅವರು ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ಹೋಟೆಲ್, ಬಾಯ್ಲರ್, ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಬಾಲ ಕಾರ್ಮಿಕರ ಬಳಕೆ ಮಾಡುವ ಬಗ್ಗೆ ಪರಿಶೀಲಿಸಬೇಕು ಅಲ್ಲದೇ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಿ ಸೌಲಭ್ಯಗಳು ತಲುಪಿರುವ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ರಾಜ್ಯದಲ್ಲಿ 58 ಲಕ್ಷ ಕಾರ್ಮಿಕ ಕಾರ್ಡ ಹೊಂದಿದ್ದರೂ ಅವೆಲ್ಲವುಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಅಕ್ರಮ ಕಾರ್ಡಗಳನ್ನು ಅನರ್ಹಗೊಳಿಸುವ ಮೂಲಕ ರಾಜ್ಯದಲ್ಲಿ ಒಟ್ಟು 32 ಲಕ್ಷ ಕಾರ್ಡಗೆ ಮಿತಿಗೊಳಿಸಲಾಗಿದೆ. ಹೊಸ ಕಾರ್ಡ ನೊಂದಣಿ ಕುರಿತಂತೆ ಕಾರ್ಮಿಕ ಇಲಾಖೆಯಲ್ಲಿ ಅರ್ಜಿ ಪರಿಶೀಲನೆಯನ್ನು ಅಧಿಕಾರಿಗಳು ಸರಿಯಾಗಿ ಮಾಢಬೇಕು. ಇಲ್ಲದಿದ್ದಲ್ಲಿ ನಿಮ್ಮನ್ನೇ ಹೊಣೆಗಾರರನ್ನಾಗಿ ಶಿಕ್ಷಿಸಬೇಕಾಗುತ್ತದೆ ಎಂದು ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button