ವಿಶ್ವ ಮಾತೃ ಭಾಷೆ ದಿನವೇ ನಿರ್ವಾಹಕನ ಮೇಲೆ ಮರಾಠಿ ಭಾಷಿಕ ಪುಂಡರ ಹಲ್ಲೆ.

ಬೆಳಗಾವಿ: ವಿಶ್ವ ಮಾತೃ ಭಾಷೆ ದಿನವೇ ಕಿಡಿಗೇಡಿಗಳು ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಬೆಳಗಾವಿ- ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‌ನಲ್ಲಿ ಗಲಾಟೆ ನಡೆದಿದ್ದು, ಈ ಬಸ್‌ನ ನಿರ್ವಾಹಕ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ (51) ಹಲ್ಲೆಗೆ ಒಳಗಾದವರು.
ಬಸ್‌ನಲ್ಲಿದ್ದ ಯುವತಿಗೆ ಆಧಾರ ಕಾರ್ಡ್ ತೋರಿಸುವಂತೆ ನಿರ್ವಾಹಕ ಕೇಳಿದ್ದಾರೆ. ಕನ್ನಡದಲ್ಲಿ ಯುವತಿಗೆ ಆಧಾರ್ ಕಾರ್ಡ್ ತೋರಿಸು ಎಂದು ಕೇಳಿದ್ದಕ್ಕೆ ಮರಾಠಿ ಭಾಷಿಕ ಪುಂಡರು ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾರೆ.
ಯುವತಿ ಜೊತೆಗೆ ಮರಾಠಿಯಲ್ಲಿ ಮಾತನಾಡುವಂತೆ ನಿರ್ವಾಹಕನ ಜೊತೆಗೆ ಕಿಡಿಗೇರಿಗಳು ತಗಾದೆ ತೆಗೆದಿದ್ದಾರೆ. ಈ ವೇಳೆ ಯುವಕರು ಹಾಗೂ ಬಸ್ ನಿರ್ವಾಹಕನ ನಡುವೆ ಮಾತಿಕ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಸ್ನೇಹಿತರನ್ನು ಕರೆಸಿ ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಬಸ್ ನಿರ್ವಾಹಕ ಮಲ್ಲಪ್ಪ ಹುಕ್ಕೇರಿ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.