ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿ ಹೋದ ನರೇಗಾ ಕೂಲಿಕಾರ.

ಗಂಗಾವತಿ (ಕೊಪ್ಪಳ) : ನರೇಗಾದ ಕೂಲಿಕಾರರೊಬ್ಬರು ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್ (ನಂಬರ್ 28ನೇ ಕಾಲುವೆ) ಬಳಿ ಭಾನುವಾರ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಹನುಮಂತಪ್ಪ ಬಾಗಪ್ಪ ಅದಾಪುರ ಎಂದು ಗುರುತಿಸಲಾಗಿದೆ. ಬಡ ಕುಟುಂಬಕ್ಕೆ ಸೇರಿದ್ದ ಈ ವ್ಯಕ್ತಿ ಗ್ರಾಮ ಪಂಚಾಯಿತಿಗಳು ಅನುಷ್ಠಾನ ಮಾಡುವ ಕೇಂದ್ರ ಸರ್ಕಾರದ ನರೇಗಾ ಕೂಲಿ ಕೆಲಸಕ್ಕೆ ಬಂದಿದ್ದ ಎಂದು ಗೊತ್ತಾಗಿದೆ.
ಕೆಲಸ ನಡೆಯುವ ಸ್ಥಳದಲ್ಲಿ ಕೂಲಿಕಾರರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕು. ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಘಟನೆಗೆ ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಪ್ಪ ನೇರ ಕಾರಣವಾಗಿದ್ದಾರೆ ಎಂದು ನರೇಗಾ ಕೂಲಿಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು
‘ಕೆಲಸ ನಿಗಧಿ ಮಾಡಿದ ಸ್ಥಳದಲ್ಲಿ ಆಯಾ ಪಂಚಾಯಿತಿಯಿಂದಲೇ ಪಿಡಿಒ, ಕೂಲಿಕಾರರಿಗೆ ನೆರಳಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ತುರ್ತು ಚಿಕಿತ್ಸೆಗಾಗಿ ಸಿಬ್ಬಂದಿ ನಿಯೋಜನೆ, ಮಹಿಳಾ ಕೂಲಿಕಾರರಿಗೆ ಐದು ವರ್ಷದೊಳಗಿನ ಮಕ್ಕಳಿದ್ದಲ್ಲಿ ಆ ಮಕ್ಕಳ ಪಾಲನೆಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂಬ ನಿಯಮವಿದೆ. ಆದರೆ ಪಿಡಿಒ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಮಾಡಿರಲಿಲ್ಲ. ಬಿರು ಬೇಸಿಗೆ ಈಗಾಗಲೆ ಆರಂಭವಾಗಿದ್ದು, ವಿಪರೀತ ಬಿಸಿಲಿನ ಮಧ್ಯೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬಾಯಾರಿಕೆಯಾಗಿ ಹನುಮಂತಪ್ಪ ಅದಾಪುರ, ನೀರು ಕುಡಿಯಲು ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಗೆ ಹೋಗಿದ್ದಾರೆ. ಕಾಲುವೆಯ ಇಳಿಜಾರಿನಲ್ಲಿ ನಿಂತು ಬಾಗಿ ನೀರು ಕುಡಿಯುವ ಸಂದರ್ಭದಲ್ಲಿ ಆಯಾ ತಪ್ಪಿ ಕಾಲುವೆಗೆ ಜಾರಿದ್ದಾರೆ. ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನ ರಭಸಕ್ಕೆ ಹನುಮಂತಪ್ಪ ಕೊಚ್ಚಿಕೊಂಡು ಹೋಗಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.