ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಸಕ್ಕರೆ ಕಾರ್ಖಾನೆಗೆ ,ಯಾದವಾಡ ಗ್ರಾಮಸ್ಥರ ವಿರೋಧ

ಧಾರವಾಡ: ತಾಲೂಕಿನ ಕರಡಿಗುಡ್ಡ, ಯಾದವಾಡ ಹಾಗೂ ಪುಡಕಲಕಟ್ಟಿ ಗ್ರಾಮಗಳ ಮಧ್ಯೆದ ಜಮೀನಿನಲ್ಲಿ ಆರಂಭವಾಗುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಮೃಣಾಲ್ ಸಕ್ಕರೆ ಕಾರ್ಖಾನೆಗೆ ಯಾದವಾಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಆರಂಭಿಸಬಾರದು ಇದರಿಂದ ಮೂರೂ ಗ್ರಾಮಗಳ ರೈತರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಯಾದವಾಡ ಗ್ರಾಮಸ್ಥರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಕ್ಕರೆ ಕಾರ್ಖಾನೆ ಆರಂಭಿಸುವುದರಿಂದ ರೈತರ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ರೈತರ ಫಲವತ್ತಾದ ಭೂಮಿ ಹದಗೆಡುತ್ತದೆ. ರಸ್ತೆಗಳು ಹಾಳಾಗುತ್ತವೆ. ಸಕ್ಕರೆ ಕಾರ್ಖಾನೆಯ ವಾಸನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಪರಿಸರ ಮಾಲಿನ್ಯ ಕೂಡ ಆಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಆರಂಭಿಸಲು ನಾವು ಬಿಡುವುದಿಲ್ಲ. ಇದಕ್ಕೆ ಯಾದವಾಡ ಗ್ರಾಮ ಪಂಚಾಯ್ತಿಯಿಂದ ಎನ್‌ಓಸಿ ಅನುಮತಿ ಸಹ ನೀಡುವುದಿಲ್ಲ ಎಂದು ಪಂಚಾಯ್ತಿ ಸದಸ್ಯರು ಸ್ಪಷ್ಟವಾಗಿ ವಿರೋಧಿಸಿದ್ದಾರೆ.
ಇನ್ನೂ ಗ್ರಾಮಸ್ಥರ ವಿರೋಧದ ಮಧ್ಯೆಯೂ ಸಕ್ಕರೆ ಕಾರ್ಖಾನೆ ಕಾಮಗಾರಿ ಹೀಗೇಯೇ ಆರಂಭಗೊಂಡರೆ ಗ್ರಾಮ ಪಂಚಾಯ್ತಿ ಸದಸ್ಯರೆಲ್ಲ ರಾಜೀನಾಮೆ ನೀಡಿ, ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೂಡಾ ಗ್ರಾಮ ಪಂಚಾಯ್ತಿ ಸದಸ್ಯರು ನೀಡಿದ್ದು, ಈ ಬಗ್ಗೆ ಯಾವ ನಿರ್ಧಾರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.