
ಬೆಂಗಳೂರಿನ ಹಿರಿಯ ನ್ಯಾಯವಾದಿ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿರುವ ಬೆಳಗಾವಿ ವಕೀಲರ ಸಂಘದ ಪದಾಧಿಕಾರಿಗಳು ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷರು ಆಗಿರುವ ವೈ. ಆರ್. ಸದಾಶಿವ ರೆಡ್ಡಿ ಅವರ ಮೇಲೆ ಇತ್ತೀಚೆಗೆ ಅವರ ಕಚೇರಿಗೆ ನುಗ್ಗಿ ಕೆಲವು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು ಈ ಘಟನೆಯನ್ನು ಬೆಳಗಾವಿ ಬಾರ್ ಅಸೋಸಿಯೇಷನ್ ದಿಂದ ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎಸ್. ಎಸ್. ಕಿವಡಸನ್ನವರ, ಭಾರತೀಯ ವಕೀಲರ ಪರಿಷತ್ತಿನ ಸದಸ್ಯರು ಆಗಿರುವ ಹಿರಿಯ ನ್ಯಾಯವಾದಿ ವೈ ಆರ್ ಸದಾಶಿವ ರೆಡ್ಡಿ ಅವರ ಮೇಲೆ ಅವರದೇ ಕಚೇರಿಗೆ ನುಗ್ಗಿ ಹಲ್ಲೆ ಮಾಡಿರುವುದನ್ನು ಬೆಳಗಾವಿ ವಕೀಲರ ಸಂಘದಿಂದ ತೀವ್ರವಾಗಿ ಖಂಡಿಸುತ್ತೇವೆ.
ಮುಖ್ಯಮಂತ್ರಿಗಳು ಸಹ ಒಬ್ಬ ವಕೀಲರಾಗಿದ್ದಾರೆ ಸಚಿವ ಸಂಪುಟದಲ್ಲಿರುವ ಅನೇಕ ಮಂತ್ರಿಗಳು ಸಹ ವಕೀಲರಾಗಿದ್ದಾರೆ ಹೀಗಿದ್ದರೂ ವಕೀಲರ ಮೇಲೆ ಬೆಳಗಾವಿ ಜಿಲ್ಲೆಯು ಸೇರಿದಂತೆ ರಾಜ್ಯಾದ್ಯಂತ ಅಲ್ಲಲ್ಲಿ ಹಲ್ಲೆಗಳು ನಡೆಯುತ್ತಲೇ ಇವೆ. ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ ಸರ್ಕಾರ ನ್ಯಾಯವಾದಿಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಗುತ್ತಿಲ್ಲ.
ನ್ಯಾಯವಾದಿಗಳು ಸಮಾಜ ಸೇವೆಯಲ್ಲಿ ಇರುವುದರಿಂದ ಅವರಿಗೆ ರಕ್ಷಣೆ ಅಗತ್ಯವಿದೆ ಅವರ ಕುರಿತು ಸರಕಾರ ಕಾಳಜಿ ವಹಿಸಬೇಕು ಈ ನಿಟ್ಟಿನಲ್ಲಿ ಈ ಕೂಡಲೇ ನ್ಯಾಯವಾದಿಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ಅನುಷ್ಠಾನಗೊಳಿಸಬೇಕು ಹಾಗೂ ನ್ಯಾಯವಾದಿ ವೈ ಆರ್ ಸದಾಶಿವರೆಡ್ಡಿ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್. ಎಸ್. ಕಿವಡಸನ್ನವರ, ಉಪಾಧ್ಯಕ್ಷರಾದ ಬಸವರಾಜ ಮುಗಳಿ, ಶೀತಲ್ ರಾಮಶೆಟ್ಟಿ, ಪದಾಧಿಕಾರಿಗಳಾದ ವಿಶ್ವನಾಥ ಸುಲ್ತಾನಪುರಿ, ಸುನಿಲ್ ಕುಮಾರ್ ಅಗಸಗಿ, ಈರಣ್ಣ ಪೂಜಾರ, ವಿನಾಯಕ ನಿಂಗನೂರೆ, ಅನಿಲ್ ಪಾಟೀಲ ಹಾಗೂ ಅಶ್ವಿನಿ ಹವಾಲ್ದಾರ್ ಸೇರಿದಂತೆ ಇನ್ನಿತರ ನ್ಯಾಯವಾದಿಗಳು ಉಪಸ್ಥಿತರಿದ್ದರು.