
ಬೆಳಗಾವಿ: ಕಾಂಗ್ರೆಸ್ ಸಂವಿಧಾನ ರಕ್ಷಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ನುಸುಳಿ ಬಂದು ಸಿಎಂ ವಿರುದ್ಧ ಗೋ ಬ್ಯಾಕ್ ಪಾಕಿಸ್ತಾನ ಘೋಷಣೆಗಳನ್ನು ಕೂಗಿ ಕಪ್ಪು ಬಾವುಟ ಪ್ರದರ್ಶಿಸಿ ಹೈಡ್ರಾಮಾ ನಡೆಸಲಾಯಿತು. ಈ ವೇಳೆ ಬಿಜೆಪಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದ್ಯೋಯ್ಯಲು ಪೊಲೀಸರಿಗೆ ಹರಸಾಹಸ ಪಡಬೇಕಾಯಿತು.
ಇಂದು ಬೆಳಗಾವಿಯ ಸಿ.ಪಿಎಡ್. ಮೈದಾನದಲ್ಲಿ ಕಾಂಗ್ರೆಸ್ ಸಂವಿಧಾನ ರಕ್ಷಣೆ ಮತ್ತು ಕೇಂದ್ರದ ಬೆಲೆ ಏರಿಕೆಯನ್ನು ಖಂಡಿಸಿ ಸಮಾವೇಶವನ್ನು ಆಯೋಜಿಸಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗ ಸಮಾವೇಶಕ್ಕೆ ಆಗಮಿಸಿದ ಬಿಜೆಪಿ ಮಹಿಳಾ ಕಾರ್ಯಕರ್ತರಾದ ಶಿಲ್ಪಾ ಕೇಕರೆ, ಪವಿತ್ರಾ ಹಿರೇಮಠ, ರೇಷ್ಮಾ ಭರಮುಚೆ, ಮಂಜುಳಾ ಹಣ್ಣಿಕೇರಿ, ಅನ್ನಪೂರ್ಣಾ ಹಾವಳ ಅವರು ಸಿಎಂ ವಿರುದ್ಧ ಗೋ ಬ್ಯಾಕ್ ಪಾಕಿಸ್ತಾನ ಘೋಷಣೆಗಳನ್ನು ಕೂಗಿ ಕಪ್ಪು ಬಾವುಟ ಪ್ರದರ್ಶಿಸಿ ಗಲಾಟೆ ನಡೆಸಿದರು.
ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಿಎಂ ಸಿದ್ಧರಾಮಯ್ಯ ಸೇರಿದಂತೆ ಸಚಿವರು ಶಾಸಕರು ಕೂಡ ಇದರಿಂದಾಗಿ ಗೊಂದಲಕ್ಕೆ ಒಳಗಾಗಿದರು. ವೇದಿಕೆಯ ಭಾಷಣದಲ್ಲೇ ಸಿಎಂ ಸಿದ್ಧರಾಮಯ್ಯ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ವೇದಿಕೆಯ ಹೊರಗೆ ಬಿಜೆಪಿ ಮಹಿಳಾ ಕಾರ್ಯಕರ್ತೆರನ್ನು ಕೂಡಲೇ ವಶಕ್ಕೆ ಪಡೆಯಲು ಪೊಲೀಸರಿಗೆ ಹರಸಾಹಸ ಪಡಬೇಕಾಯಿತು.
ಪೊಲೀಸ್ ವಾಹನದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕರೆದೊಯ್ಯುವಾಗ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಾಹನಕ್ಕೆ ಮುತ್ತಿಗೆ ಹಾಕಿ ತಡೆದು ಮತ್ತೇ ವಾಗ್ವಾದ ನಡೆಸಿದರು. ಪೊಲೀಸರು ಲಾಠಿ ಬೀಸಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರನ್ನು ಕರೆದೊಯ್ದರು.