
ಹುಬ್ಬಳ್ಳಿ: ಜಮ್ಮು ಕಾಶ್ಮೀರದ ಪೆಹಲ್ಗಾಮ್’ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮಾಡಿದ ಉಗ್ರರ ದಾಳಿಯ ಪ್ರತಿಕಾರವಾಗಿ, ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ನೆಲೆಗಳ ಮೇಲೆ ನಡೆಸಿದ ಸೇನಾ ದಾಳಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ವಿಜಯೋತ್ಸವ ಆಚರಿಸಿ, ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಆಗ್ರಹಿಸಿದರು.
ಈ ವೇಳೆ ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ನರೇಂದ್ರ ಮೋದಿ ನೇತೃತ್ವದಲ್ಲಿ ಆಪರೇಷನ್ ಸಿಂಧೂರ ಮೂಲಕ ಅರ್ಥಗರ್ಭಿತವಾದ ಕೆಲಸ ಮಾಡಲಾಗಿದೆ. ಈ ಮೂಲಕ ಯುದ್ದ ಪ್ರಾರಂಭವಾಗಿದೆ ಎಂದರು.
ದೇಶದ ಜನರು ಪ್ರತಿಕಾರಕ್ಕೆ ಕಾಯತ್ತಾ ಇದ್ದರು, ಅದರಂತೆ ಸೇನೆ 9 ಕಡೆಗೆ ದಾಳಿ ಮಾಡಿದೆ, ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೈನಿಕರಿಗೆ ಮುಕ್ತ ಅವಕಾಶ ಕೊಟ್ಟಂತಹ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಪ್ರತಿಕಾರ ಇಷ್ಟಕ್ಕೆ ನಿಲ್ಲಬಾರದು, ಪಾಕಿಸ್ತಾನ ಸೈನಿಕರ ಸೆಂಟರ್’ಗಳು, ಆಯುಧ ಕೇಂದ್ರಗಳ ನಾಶವಾಗಬೇಕು, ನೂರು ವರ್ಷ ಪಾಕಿಸ್ತಾನ ತಲೆ ಎತ್ತಬಾರದು, ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಸದ್ಯ ಕೇಂದ್ರದಲ್ಲಿ ಕಾಂಗ್ರೆಸ್’ನಂತಹ ನಾಯಕತ್ವವಿಲ್ಲ, ಈ ರೀತಿಯ ಗಾಂಧಿವಾದದ ಪರಿಣಾಮದಿಂದ ಲಕ್ಷಾಂತರ ಜನರನ್ನು ಕಳೆದುಕೊಂಡಿದ್ದೇವೆ, ದೇಶದಲ್ಲಿ ಭಯೋತ್ಪಾದನೆಯನ್ನು ಹುಟ್ಟು ಹಾಕಿದ್ದೆ ನೀವು, ನಮ್ಮ ದೇಶದ ಸೈನಿಕರನ್ನು ಕೊಂದು ಹಾಕಿದ್ದೆ ಕಾಂಗ್ರೆಸ್, ಹಿಂದೂಗಳ ಹತ್ಯೆಯಾದ ವ್ಯಕ್ತಿಗಳ ಮೇಲೆ, ಈ ಸಮಯದಲ್ಲಿ ಗಾಂಧೀಜಿ ಅಲ್ಲ, ಸುಭಾಷ್ ಚಂದ್ರ ಬೋಸ ಅವರ ಸಿದ್ದಾಂತದ ಮೂಲಕ ಉತ್ತರ ಕೊಡತ್ತಾ ಇದ್ದೇವೆ ಎಂದರು.