
ಬೆಂಗಳೂರು: ವಂಚನೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ವಿರುದ್ಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಡಿಯ ಮಾಜಿ ಸಹಾಯಕ ನಿರ್ದೇಶಕರಾಗಿದ್ದ ಸೋಮಶೇಖರ್.ಎನ್ ಹಾಗೂ ಅವರ ಪುತ್ರ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೋಮಶೇಖರ್ ಮತ್ತು ಅವರ ಮಗ ನಿರಂಜನ್ ಎಸ್ ಮಯೂರ್ ಅವರು ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡಿದ್ದರೆಂದು ವಾಫೆ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಜಿ ನಿರ್ದೇಶಕ ಸುಹಾಸ್. ಆರ್ ಅವರು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಐಪಿಸಿ ಸೆಕ್ಷನ್ 120ಬಿ, 406, 420ರ ಅಡಿ ಎಫ್ಐಆರ್ ದಾಖಲಾಗಿದೆ.
ಸೋಮಶೇಖರ್ ಪುತ್ರ 2021ರ ಡಿಸೆಂಬರ್ನಲ್ಲಿ ಸುಹಾಸ್ರನ್ನು ಭೇಟಿ ಮಾಡಿದ್ದರು. ಭೇಟಿ ವೇಳೆ ವಾಫೆ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಆರಂಭದ ಬಗ್ಗೆ ಮಾತುಕತೆ ನಡೆದಿತ್ತು. ಸುಹಾಸ್ ಕಂಪನಿಯ 3,334 ಶೇರ್ ಖರೀದಿ ಮಾಡಿದ್ದರು. ಅಲ್ಲದೇ ಸುಹಾಸ್ ಕಂಪನಿಯ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದರು ಎಂದೂ ದೂರಿನ ಪ್ರತಿಯಲ್ಲಿದೆ.