
ಬೆಂಗಳೂರು: ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ಪಾಲ್ಗೊಳ್ಳಲು ನಗರದ ಚಿನ್ನಸ್ವಾಮಿ ಸ್ಟೇಡಿಯಂನೊಳಗೆ ಹೋಗುವ ಆತುರದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ಧಾರೆ.
ತಮ್ಮ ನೆಚ್ಚಿನ ಆಟಗಾರರನ್ನು ಸನಿಹದಿಂದ ಕಣ್ತುಂಬಿಕೊಳ್ಳಲು ಸ್ಟೇಡಿಯಂಗೆ ಜನಸಾಗರವೇ ಹರಿದು ಬಂದಿತ್ತು. ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು.
ಗಾಯಗೊಂಡವರನ್ನು ಕೂಡಲೇ ಸಮೀಪದ ಬೌರಿಂಗ್ ಮತ್ತು ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 19 ಗಾಯಾಳುಗಳ ಪೈಕಿ 7 ಜನ ಮೃತಪಟ್ಟರೆ, ವೈದೇಹಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 8 ಜನ ಗಾಯಾಳುಗಳ ಪೈಕಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ದುರಂತದಲ್ಲಿ 14 ವರ್ಷದ ದಿವ್ಯಾಂಶಿ ಎಂಬ ವಿದ್ಯಾರ್ಥಿನಿ ಕೂಡ ಮೃತಪಟ್ಟಿರುವ ಮಾಹಿತಿ ಇದೆ.
9ನೇ ತರಗತಿ ಓದುತ್ತಿದ್ದ ಮೃತ ದಿವ್ಯಾಂಶಿ, ಅಪ್ಪ ಶಿವಕುಮಾರ್ ಹಾಗೂ ಅಮ್ಮ ಅಶ್ವಿನಿ ಜೊತೆ ಸ್ಟೇಡಿಯಂಗೆ ಬಂದಿದ್ದಳು. ಈ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ಇದೆ.