
ವಿಜಯಪುರ: ಅರ್ಧ ಭರ್ತಿಯಾದ ಉತ್ತರ ಕರ್ನಾಟಕ ಜೀವನಾಡಿ; 5 ಜಿಲ್ಲೆಯ ರೈತರಲ್ಲಿ ಸಂತಸ
ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕ ಜೀವನಾಡಿ ಕೃಷ್ಣೆಯ ಆಲಮಟ್ಟಿ ಜಲಾಶಯವು ಅವಧಿಗೂ ಮುನ್ನವೇ ಅರ್ಧದಷ್ಟು ತುಂಬಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಕೆಪಿಸಿಎಲ್ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ. ಮಳೆಯಿಂದಾಗಿ ಕೃಷ್ಣಾ ನದಿ ಪ್ರದೇಶದ ರೈತರು ಸಂತಸಗೊಂಡಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಹೌದು, ನೆರೆಯ ರಾಜ್ಯ ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ಕಣಿವೆಯಲ್ಲಿ ಸುರಿದ ಮಳೆಯಿಂದ ಆಲಮಟ್ಟಿ ಜಲಾಶಯ ಅವಧಿಗೂ ಮುನ್ನವೇ ಅರ್ಧ ಭರ್ತಿಯಾಗಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದ ಜಲಾಶಯಕ್ಕೆ ಮೇ 19 ರಿಂದಲೇ ಒಳಹರಿವು ಆರಂಭವಾಗಿತ್ತು. ಆರಂಭದಲ್ಲಿ 424 ಕ್ಯುಸೆಕ್ ನಿಂದ ಶುರುವಾದ ಒಳಹರಿವು ಈಗ 23,230 ಕ್ಯುಸೆಕ್ಗೆ ಬಂದು ತಲುಪಿದೆ. ಮುಂಗಾರು ಪೂರ್ವ ಮಳೆಯಿಂದ ಮೇ 24 ರವರೆಗೆ ಡ್ಯಾಂಗೆ ಸಾಧಾರಣ ಒಳಹರಿವು ಇತ್ತು. 25ರಿಂದ 29ರವರೆಗೆ 35 ಸಾವಿರದಿಂದ 60 ಸಾವಿರ ಕ್ಯುಸೆಕ್ ವರೆಗೆ ಒಳಹರಿವು ಶುರುವಾಗಿದ್ದರಿಂದ ಮುಂಜಾಗ್ರತೆ ಕ್ರಮವಾಗಿ ಮೇ 29ರಂದು ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ 10 ಸಾವಿರ ಕ್ಯುಸೆಕ್ ನೀರು ಹರಿಬಿಡುವ ಮೂಲಕ ಪ್ರಸಕ್ತ ಸಾಲಿನಲ್ಲಿ ಪ್ರಥಮ ಬಾರಿಗೆ ಹೊರಹರಿವು ಆರಂಭಿಸಲಾಯಿತು. ನಂತರದ ದಿನಗಳಲ್ಲಿ ಒಳಹರಿವಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದ್ದರಿಂದ ಹೊರಹರಿವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ 8666 ಕ್ಯೂಸೆಕ್ ನೀರು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ. ನೀರು ಹರಿಬಿಡುವ ಮೊದಲು ಮುನ್ಸೂಚನೆ ನೀಡಲಾಗುತ್ತಿದೆ.
ಇನ್ನೂ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಅರ್ಭಟ ಆರಂಭವಾಗಿದ್ದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಶುಕ್ರವಾರ ಬೆಳಗ್ಗೆಯಿಂದ ಮತ್ತೆ ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ ನೀರು ಹರಿಬಿಡಲಾಗುತ್ತಿದೆ. ತಿಂಗಳ ಎರಡನೇ ವಾರದಲ್ಲೇ ಜಲಾಶಯ ಅರ್ಧದಷ್ಟು ಭರ್ತಿಯಾಗಿರುವುದು ದಾಖಲೆಯಾಗಿದೆ. ಕಳೆದ ಐದಾರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವುದು ಜತೆಗೆ ಜಲಾಶಯ ಅರ್ಧ ಭರ್ತಿಯಾಗಿದ್ದರಿಂದ ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಯ ಕೃಷ್ಣಾ ಆಚ್ಚುಕಟ್ಟು ಪ್ರದೇಶದ ರೈತರು ಸಂತಸಗೊಂಡಿದ್ದಾರೆ. ಸದ್ಯ ಮೃಗಶಿರಾ ಮಳೆ ಸುರಿಯುತ್ತಿರು ವುದು ರೈತರಲ್ಲಿ ಉತ್ತಮ ಮುಂಗಾರು ಹಂಗಾಮಿನ ಭರವಸೆ ಮೂಡಿಸಿದೆ. ಸದ್ಯ ಜಮೀನಿನಲ್ಲಿ ತೇವಾಂಶ ಹೆಚ್ಚಿದ್ದು, ಭೂಮಿ ಸ್ವಲ್ಪ ಒಣಗಿದ ನಂತರ ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಲಿದ್ದಾರೆ. ಇನ್ನೊಂದೆಡೆ ಈಗಾಗಲೇ ಬಿತ್ತನೆಯಾಗಿ ತೇವಾಂಶ ಕೊರತೆ ಎದುರಿಸುತ್ತಿದ್ದ ಬೆಳೆಗೆ ಜೀವ ಕಳೆ ಬಂದಿದೆ. ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಕರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಆಲಮಟ್ಟಿ ಡ್ಯಾಂನ ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ ನೀರು ಹರಿಸಲಾಗುತ್ತಿದೆ.
ಒಟ್ನಲ್ಲಿ ಕೃಷ್ಣಾ ಒಡಲು ತುಂಬುತ್ತಿದೆ. ಕೃಷ್ಣಾ ನದಿಯ ಒಡಲು ತುಂಬಿದರೆ ಹೊಲಗಳಲ್ಲಿ ಬೆಳೆ ಬೆಳೆದು ಕಳೆ ಬರಲಿದೆ. ಈ ಭಾಗದ ರೈತರು ಫುಲ್ ಸಂತಸದಲ್ಲಿದ್ದು ಬಿತ್ತಣಿಕೆಗೆ ತಯಾರಿ ನಡೆಸುತ್ತಿದ್ದಾರೆ.