ಮಹಾಮೇಳಾವ್ಗೆ ಮುಂದಾದ ಎಂಇಎಸ್ ಮುಖಂಡರ ಬಂಧನ

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ಆಚರಿಸಲು ಮುಂದಾದ ಎಂಇಎಸ್ ಮುಖಂಡರಿಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಬ್ಬೊಬ್ಬರನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ.
ಬೆಳಗಾವಿಯಲ್ಲಿ ಇಂದಿನಿಂದ ಹತ್ತು ದಿನ ಅಧಿವೇಶನ ನಡೆಯಲಿದೆ. ಪ್ರತಿವರ್ಷವೂ ಕರ್ನಾಟಕ ಸರ್ಕಾರಕ್ಕೆ ಮುಜುಗರ ತರುವ ಉದ್ದೇಶಿದಿಂದ ಅಧಿವೇಶನ ನಡೆಯುವ ಮೊದಲ ದಿನವೇ ಮಹಾಮೇಳಾವ್ ಹೆಸರಿನಲ್ಲಿ ಎಂಇಎಸ್ ಮುಖಂಡರು ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ.
ಲ್ಲಿನ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಸಮಾವೇಶ ನಡೆಸಲು ಇಂದೂ ಕೂಡ ತಯಾರಿ ನಡೆಸಲಾಗಿತ್ತು. ಆದರೆ, ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಅಲ್ಲದೇ ಎಂಇಎಸ್ ಮುಖಂಡರು ಮನೆ ಬಿಟ್ಟು ಹೊರಬಾರದಂತೆ ಪೊಲೀಸರು ಬೆಳಿಗ್ಗೆಯಿಂದಲೇ ಕಟ್ಟೆಚ್ಚರ ವಹಿಸಿದ್ದರು. ಮನೆಯಿಂದ ಹೊರಬರುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.
ಬೆಳಗಾವಿ, ನಿಪ್ಪಾಣಿ, ಬೀದರ್, ಬಾಲ್ಕಿ ಕಾರವಾರವನ್ನು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಘೋಷಣೆಗಳನ್ನು ಕೂಗುತ್ತಾ ವ್ಯಾಕ್ಸಿನ್ ಡಿಪೋ ಕಡೆ ಆಗಮಿಸುತ್ತಿದ್ದ ಎಂಇಎಸ್ ಮುಖಂಡರನ್ನು ಪೊಲೀಸರು ತಡೆದರು. ಈ ವೇಳೆ ವಾಗ್ವಾದ ನಡೆಯಿತು. ಎರಡನೇ ರೈಲ್ವೆ ಗೇಟ್ ಬಳಿ ಪೊಲೀಸರು ಅವರನ್ನು ವಶಕ್ಕೆ ಪಡೆದರು.


