ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಕೋರಿದರು.

ನವದೆಹಲಿ/ಬೆಂಗಳೂರು: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಕಾಳಜಿ ವಹಿಸಿರುವ ಮುಖ್ಯಮಂತ್ರಿಗಳು ಗುರುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಶುಕ್ರವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿ ಮಾಡಿದ ಸಿಎಂ, ನೀರಾವರಿ ಯೋಜನೆಗಳ ಜಾರಿಗೆ ಸಹಕಾರ ಕೋರಿದರು.
ಮೇಕೆದಾಟು ಯೋಜನೆ: ಸುಪ್ರೀಂ ಕೋರ್ಟ್ 13.11.2025ರಂದು ತಮಿಳುನಾಡು ರಾಜ್ಯದ ವಿವಿಧ ಅರ್ಜಿಗಳನ್ನು ವಜಾಗೊಳಿಸಿ, ಮೇಕೆದಾಟು ಯೋಜನೆಯ ಅನುಮತಿಯ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಜಲ ಆಯೋಗ (CWC) ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. CWMA ಈಗಾಗಲೇ ಯೋಜನೆಯನ್ನು ಮೌಲ್ಯಮಾಪನ ಮಾಡಲು CWCಗೆ ಸೂಚಿಸಿರುವುದರಿಂದ, ಈ ಯೋಜನೆಗೆ ಶೀಘ್ರ ಅನುಮತಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೃಷ್ಣಾ ನೀರು ವಿವಾದ: ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣ-II (KWDT-II) ತೀರ್ಪು ನೀಡಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಕೇಂದ್ರ ಸರ್ಕಾರವು ಇನ್ನೂ ಸಹ ಈ ತೀರ್ಪನ್ನು ಗೆಜೆಟ್ನಲ್ಲಿ ಅಧಿಸೂಚಿಸಿಲ್ಲ. ಕರ್ನಾಟಕ ರಾಜ್ಯವು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-IIIರ ಅನುಷ್ಠಾನದಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿದೆ. ನಮ್ಮ ಯೋಜನೆಯನ್ನು ಮುಂದುವರೆಸಲು ಹಾಗೂ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಕೇಂದ್ರದ ಬೆಂಬಲದ ಅಗತ್ಯವಿದೆ ಎಂದು ಸಿಎಂ ಕೋರಿದರು.
ಕಳಸಾ ಬಂಡೂರಿ ಯೋಜನೆ: ಮಹದಾಯಿ ಕಣಿವೆಯಡಿ ಬರುವ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಗಳನ್ನು ಹುಬ್ಬಳ್ಳಿ- ಧಾರವಾಡದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಉದ್ದೇಶಿಸಲಾಗಿದೆ. ಇವುಗಳಿಗೆ ಡಿಸೆಂಬರ್ 2022ರಲ್ಲಿ CWC/ಜಲಶಕ್ತಿ ಸಚಿವಾಲಯವು ಅನುಮತಿ ನೀಡಿದ್ದರೂ, ಈ ಯೋಜನೆಗೆ ಯಾವುದೇ ಕಾನೂನು ಅಡಚಣೆಗಳಿಲ್ಲದಿದ್ದರೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (MoEF & CC) ಅರಣ್ಯ/ವನ್ಯಜೀವಿ ಅನುಮತಿ ಇನ್ನೂ ಸಿಕ್ಕಿಲ್ಲ. ಇದರಿಂದಾಗಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ತೀರ್ಪಿನ ಅನ್ವಯ ಹಂಚಿಕೆಯಾದ ನೀರನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆದಷ್ಟು ಬೇಗ ಈ ಯೋಜನೆಗಳಿಗೆ ಅನುಮತಿ ಕೊಡಿಸಬೇಕು ಎಂದು ಕೋರಿದರು.
ಏತ ನೀರಾವರಿ, ಕಾಲುವೆ ಕಾಮಗಾರಿ: ಭಾರತ ಸರ್ಕಾರದ AIBP-PMKSY ಮತ್ತು FMBAP ಯೋಜನೆಗಳಡಿ ಕೇಂದ್ರದ ನೆರವು ಕೋರಿ ಕರ್ನಾಟಕ ರಾಜ್ಯವು ಫೆಬ್ರವರಿ 2025ರಲ್ಲಿ ಈ ಕೆಳಗಿನ ಯೋಜನೆಗಳ PFR/DPRಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
ಸೊಂತಿ ಏತ ನೀರಾವರಿ, ಇಂಡಿ ಶಾಖಾ ಕಾಲುವೆ, ಮಲಪ್ರಭಾ ಕಾಲುವೆ ಬಾಕಿ ಕಾಮಗಾರಿ, ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಶಾಖಾ ಕಾಲುವೆ, ತುಂಗಭದ್ರಾ ಎಡದಂಡೆ ಕಾಲುವೆ ಬಾಕಿ ಕಾಮಗಾರಿ, ಬೆಣ್ಣಿಹಳ್ಳ ನದಿಯ ಪ್ರವಾಹ ನಿಯಂತ್ರಣ ಮತ್ತು ಪ್ರವಾಹ ನಿರ್ವಹಣೆ ಯೋಜನೆಗಳಿಗೆ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡಿದರು.



