Uncategorized

ವಿಠ್ಠಲನ ದರ್ಶನಕ್ಕಾಗಿ ವಾರಕರಿ ಮಹಾಸಂಘದ ವತಿಯಿಂದ ಪಾದಯಾತ್ರೆ

ಬೆಳಗಾವಿ ಹಾಗೂ ಗಡಿ ಭಾಗದ ಭಕ್ತರ ಆರಾಧ್ಯ ದೈವ ವಿಠ್ಠಲನ ದರ್ಶನಕ್ಕಾಗಿ ವಾರಕರಿ ಮಹಾಸಂಘದ ವತಿಯಿಂದ ಪ್ರತಿವರ್ಷ ಹಮ್ಮಿಕೊಳ್ಳಲಾಗುವ ಐತಿಹಾಸಿಕ ಪಂಢರಪುರ ಪಾದಯಾತ್ರೆಯ (ದಿಂಡಿ) ದಿನಾಂಕಗಳು ಪ್ರಕಟಗೊಂಡಿವೆ., ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಕಿ ಸೋಹಳಾ-2026ರ ಪಾದಯಾತ್ರೆಯ ಅಧಿಕೃತ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಗಿದ್ದು, ಜುಲೈ 8 ರಿಂದ ಯಾತ್ರೆ ಆರಂಭವಾಗಲಿದೆ.
ಬೆಳಗಾವಿ ಮತ್ತು ಗಡಿ ಭಾಗದ ಭಕ್ತರ ಅನುಕೂಲಕ್ಕಾಗಿ 1993 ರಲ್ಲಿ ಪ್ರಾರಂಭಗೊಂಡ ಈ ಪಾದಯಾತ್ರೆಯು ಪ್ರಸ್ತುತ 33ನೇ ವರ್ಷಕ್ಕೆ ಹೆಜ್ಜೆ ಇರಿಸಿದೆ. ಆರಂಭದಲ್ಲಿ ಸಣ್ಣದಾಗಿ ಶುರುವಾಗಿದ್ದ ಈ ಯಾತ್ರೆ ಇಂದು ವಿಶಾಲವಾಗಿ ಬೆಳೆದಿದ್ದು, ಕಳೆದ 10-15 ವರ್ಷಗಳಿಂದ ಕನಿಷ್ಠ 700 ರಿಂದ 800 ವಾರಕರಿಗಳು ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಬೆಳಗಾವಿ, ಕೊಲ್ಹಾಪುರ, ಚಂದಗಡ ಹಾಗೂ ಗೋವಾ ಭಾಗದ ದಾನಿಗಳ ಮತ್ತು ಭಕ್ತರ ಉದಾರ ಸಹಕಾರದಿಂದಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ವಾರಕರಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 8 ರಂದು ಆಳಂದಿ ಚಿಂಚಫಾಟಾದಿಂದ ಈ ಪಾದಯಾತ್ರೆ ಅಧಿಕೃತವಾಗಿ ಆರಂಭವಾಗಲಿದ್ದು, ಜುಲೈ 25 ರಂದು ಪಂಢರಪುರ ತಲುಪಲಿದೆ.
ಜುಲೈ 26 ರಂದು ಸುದೀರ್ಘ ಯಾತ್ರೆಯು ಮಹಾಪ್ರಸಾದ ವಿತರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಪ್ರಸ್ತುತ ಬಿಡುಗಡೆ ಮಾಡಲಾದ ಕೈಪಿಡಿಯಲ್ಲಿ ಯಾತ್ರೆಗೆ ದೇಣಿಗೆ ನೀಡಿದ ದಾನಿಗಳ ವಿವರ, ದಿನಂಪ್ರತಿ ದಿಂಡಿ ತಂಗಲಿರುವ ಸ್ಥಳಗಳು ಮತ್ತು ಕಳೆದ ಸಾಲಿನ (2024-25) ಜಮೆ-ಖರ್ಚುಗಳ ಸಂಪೂರ್ಣ ಲೆಕ್ಕಾಚಾರವನ್ನು ನಮೂದಿಸಲಾಗಿದೆ.
ಈ ವರ್ಷ ಕೃಷಿ ಕೆಲಸಗಳು ಬೇಗ ಮುಗಿಯುವುದರಿಂದ ಸುಮಾರು 800 ರಿಂದ 900 ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ.

Related Articles

Leave a Reply

Your email address will not be published. Required fields are marked *

Back to top button