Uncategorized
: ರೈತ ಸಂಪರ್ಕ ಕೇಂದ್ರದಲ್ಲಿ ಹಗರಣದ ಆರೋಪ: ಜೂನ್ 29ಕ್ಕೆ ಕರವೇ ಹಾಗೂ ರೈತರಿಂದ ಬೃಹತ್ ಪ್ರತಿಭಟನೆ.

ಸದಲಗಾ : ರೈತ ಸಂಪರ್ಕ ಕೇಂದ್ರದಲ್ಲಿ ಹಗರಣದ ಆರೋಪ: ಜೂನ್ 29ಕ್ಕೆ ಕರವೇ ಹಾಗೂ ರೈತರಿಂದ ಬೃಹತ್ ಪ್ರತಿಭಟನೆ.
ಸದಲಗಾ: ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ (RSK) ರೈತರಿಗೆ ತೀವ್ರ ಅನ್ಯಾಯವಾಗುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ಮತ್ತು ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಜೂನ್ 29ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸದಲಗಾ ಘಟಕ ಹಾಗೂ ಸ್ಥಳೀಯ ರೈತರ ಸಂಯುಕ್ತ ಆಶ್ರಯದಲ್ಲಿ ಈ ಪ್ರತಿಭಟನೆ ಆಯೋಜನೆಗೊಂಡಿದೆ.
ರೈತರ ಬೆನ್ನಿಗೆ ನಿಲ್ಲಬೇಕಾದ ಸರ್ಕಾರಿ ಕೇಂದ್ರವೇ ಇಂದು ಅನ್ನದಾತರನ್ನು ಶೋಷಿಸುತ್ತಿದೆ ಎಂದು ಕರವೇ ಮತ್ತು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇಂಗಾ ಬೀಜ ವಿತರಣೆಯಲ್ಲಿ ತಾರತಮ್ಯ: ಪ್ರಸಕ್ತ ಬಿತ್ತನೆ ಹಂಗಾಮಿನಲ್ಲಿ ಅತ್ಯಂತ ಪ್ರಮುಖವಾಗಿರುವ ಶೇಂಗಾ ಬೀಜದ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ. ಸಾಮಾನ್ಯ ರೈತರಿಗೆ ಬೀಜ ಸಿಗುತ್ತಿಲ್ಲ, ಬದಲಿಗೆ ವಶೀಲಿಬಾಜಿ ಹಾಗೂ ಪ್ರಭಾವಿಗಳಿಗೆ ಮಾತ್ರ ಸುಲಭವಾಗಿ ವಿತರಿಸಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
”ರೈತರಿಗೆ ನ್ಯಾಯ ಬೇಕು” – ಜೂನ್ 29ಕ್ಕೆ ಹೋರಾಟದ ಕರೆ
ಈ ಎಲ್ಲಾ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಕರವೇ ಸದಲಗಾ ಘಟಕ ಮತ್ತು ತಾಲ್ಲೂಕಿನ ರೈತರು ಜೂನ್ 29ರ ಸೋಮವಾರದಂದು ಬೆಳಿಗ್ಗೆ ಸದಲಗಾದ ರೈತ ಸಂಪರ್ಕ ಕೇಂದ್ರದ ಎದುರು ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
”ರೈತರ ಕಷ್ಟವನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ನಮಗೆ ಸವಲತ್ತುಗಳು ನ್ಯಾಯಯುತವಾಗಿ ಸಿಗುವವರೆಗೂ ಮತ್ತು ಅಲ್ಲಿಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಹೋರಾಟ ನಿಲ್ಲುವುದಿಲ್ಲ” ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.



