Uncategorized

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಆರಂಭದ ಮೊದಲ ದಿನವೇ ಬೆಂಗಳೂರಿನಲ್ಲಿ ತೀವ್ರ ಗಲಾಟೆ, ಆಕ್ರೋಶ

ಬೆಂಗಳೂರು: ಅತ್ಯಂತ ಕುತೂಹಲ ಕೆರಳಿಸಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಆರಂಭದ ಮೊದಲ ದಿನವೇ ಬೆಂಗಳೂರಿನಲ್ಲಿ ತೀವ್ರ ಗಲಾಟೆ, ಆಕ್ರೋಶಕ್ಕೆ ಕಾರಣವಾಗಿದೆ.

ಚಾಮರಾಜಪೇಟೆಯ ರಾಯಪುರಂ ವಾರ್ಡ್‌ನಲ್ಲಿ ಕಾಂಗ್ರೆಸ್  ಮತ್ತು ಬಿಜೆಪಿ  ಏಜೆಂಟ್‌ಗಳ ನಡುವೆ ನಡೆದ ವಾಕ್ಸಮರಕ್ಕೆ ಬೇಸತ್ತು ಜಿಬಿಎ ಕಂದಾಯ ಅಧಿಕಾರಿಯೊಬ್ಬರು ಕಣ್ಣೀರು ಹಾಕಿದ ಘಟನೆ ನಡೆದಿದೆ.

ರಾಯಪುರಂ ವಾರ್ಡ್‌ನಲ್ಲಿ ನಿಯೋಜನೆಗೊಂಡಿದ್ದ 31 ಬಿಎಲ್‌ಓಗಳ (ಬೂತ್ ಮಟ್ಟದ ಅಧಿಕಾರಿಗಳು) ಪೈಕಿ ಕೇವಲ 14 ಜನ ಮಾತ್ರ ಹಾಜರಾಗಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್ ಏಜೆಂಟರು, ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಮೊದಲೇ ಬಿಜೆಪಿ ಏಜೆಂಟ್‌ಗಳ ಜೊತೆ ಸಭೆ ನಡೆಸಿದ್ದೀರಿ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಮುಗಿಬಿದ್ದರು.

ಎಲ್ಲಾ 31 ಬಿಎಲ್‌ಓಗಳು ಬರದ ಹೊರತು ಎಸ್‌ಐಆರ್ ಪ್ರಕ್ರಿಯೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ವೇಳೆ 11 ಜನರನ್ನು ಕಳಿಸಿ ಪ್ರಕ್ರಿಯೆ ಮುಂದುವರಿಸಲು ಬಿಜೆಪಿ ಮುಂದಾದಾಗ ಉಭಯ ಪಕ್ಷಗಳ ನಡುವೆ ಜೋರಾದ ಗಲಾಟೆ ನಡೆಯಿತು.

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಇಆರ್‌ಓ (ಚುನಾವಣಾ ನೋಂದಣಾಧಿಕಾರಿ) ಫಾತಿಮಾ ಅವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕರ್ತವ್ಯಕ್ಕೆ ಹಾಜರಾಗದ ಬಿಎಲ್‌ಓಗಳಿಗೆ ಫೋನ್ ಮೂಲಕ ತರಾಟೆಗೆ ತೆಗೆದುಕೊಂಡ ಅವರು, ನಾಳೆಯಿಂದ ಬೆಳಗ್ಗೆ 9 ಗಂಟೆಗೆ ಕಡ್ಡಾಯವಾಗಿ ಹಾಜರಿರಬೇಕೆಂದು ಕಡಕ್ ವಾರ್ನಿಂಗ್ ನೀಡಿದರು.

ಗಲಾಟೆಯ ನಂತರ ಫಾತಿಮಾ ಪ್ರತಿಕ್ರಿಯಿಸಿ, ಕೆಲ ಶಾಲೆಗಳಲ್ಲಿ ಅನುಮತಿ ಸಿಗದ ಕಾರಣ ಇಂದು ಬಿಎಲ್‌ಓಗಳ ಹಾಜರಾತಿ ಕಡಿಮೆಯಾಗಿತ್ತು. ಈಗ ಸಮಸ್ಯೆ ಬಗೆಹರಿದಿದ್ದು, ನಾಳೆಯಿಂದ ಎಲ್ಲಾ ಶಿಕ್ಷಕರು ಬರಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ಸಿಗರೇ ಬಿಎಲ್‌ಓಗಳು
ಎಸ್‌ಐಆರ್ ಪ್ರಕ್ರಿಯೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಕ್ರಮ ವಲಸಿಗರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಸುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ನಿಯಮದ ಪ್ರಕಾರ ಬಿಎಲ್‌ಓಗಳು ಸರ್ಕಾರಿ ಅಧಿಕಾರಿಗಳಾಗಿರಬೇಕು. ಆದರೆ ಚಾಮರಾಜಪೇಟೆ, ಜಯನಗರ ಸೇರಿದಂತೆ ಹಲವೆಡೆ ಸಚಿವರಾದ ಜಮೀರ್ ಅಹ್ಮದ್ ಮತ್ತು ರಾಮಲಿಂಗಾರೆಡ್ಡಿ ಅವರ ಬೆಂಬಲಿಗರನ್ನು, ಅಂದರೆ ಖಾಸಗಿ ವ್ಯಕ್ತಿಗಳನ್ನು ಬಿಎಲ್‌ಓಗಳನ್ನಾಗಿ ನೇಮಿಸಲಾಗಿದೆ. ಕೆಲವರು ಜಮೀರ್ ಫೋಟೋವನ್ನೂ ಹಾಕಿಕೊಂಡಿದ್ದಾರೆ. ಇಂತಹ ಅಕ್ರಮಗಳ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಬಿಎಲ್‌ಓಗಳ ನಿಯೋಗವೊಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಸಿಎಸ್ ಅವರು ನಮೂನೆ ಸ್ವೀಕರಿಸಿ ಸಹಿ ಹಾಕಿಕೊಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button