Uncategorized
‘IPS NARAYANA M’ ಹೆಸರಿನಲ್ಲಿ ಸೈಬರ್ ವಂಚಕರ ಬಲೆ; ಸಾರ್ವಜನಿಕರಿಗೆ ಡಿಸಿಪಿ ನಾರಾಯಣ ಎಂ. ತುರ್ತು ಎಚ್ಚರಿಕೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹಾಗೂ ಪ್ರಸ್ತುತ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ನಾರಾಯಣ ಎಂ. ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಸೈಬರ್ ವಂಚಕರು ಸಾರ್ವಜನಿಕರನ್ನು ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸ್ವತಃ ಡಿಸಿಪಿ ನಾರಾಯಣ ಎಂ. ಅವರು ವೀಡಿಯೋ ಸಂದೇಶ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ನಕಲಿ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ಸಂದೇಶಗಳಿಗೆ ಯಾವುದೇ ಕಾರಣಕ್ಕೂ ನಂಬಿಕೆ ಇಡಬಾರದು ಎಂದು ಮನವಿ ಮಾಡಿದ್ದಾರೆ.
ಸೈಬರ್ ಖದೀಮರು ‘IPS NARAYANA M’ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಗಳನ್ನು ಸೃಷ್ಟಿಸಿ, ಸಿಆರ್ಪಿಎಫ್, ಸೇನೆ ಅಥವಾ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗಾವಣೆಯಾಗುತ್ತಿರುವ ಕಾರಣ ಅವರ ಬಳಿಯಿರುವ ವಾಷಿಂಗ್ ಮೆಷಿನ್, ಫ್ರಿಡ್ಜ್, ಸೋಫಾ, ಕಾರು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ನಂಬಿಸಿ ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದಾರೆ. ಬಳಿಕ ಗೂಗಲ್ ಪೇ (GPay) ಸೇರಿದಂತೆ ಆನ್ಲೈನ್ ಪಾವತಿ ಮೂಲಕ ಹಣ ಪಡೆದು ಸಂಪರ್ಕ ಕಡಿತಗೊಳಿಸಿ ವಂಚನೆ ಎಸಗುತ್ತಿದ್ದಾರೆ.
ಇತ್ತೀಚೆಗೆ ವಂಚಕರು ಮತ್ತೊಂದು ಹೊಸ ತಂತ್ರವನ್ನು ಅನುಸರಿಸಿದ್ದು, ಡಿಸಿಪಿ ನಾರಾಯಣ ಎಂ. ಅವರ ಜನ್ಮದಿನದ ನೆಪದಲ್ಲಿ “ಬರ್ತ್ಡೇ ಗಿಫ್ಟ್” ಕಳುಹಿಸುವುದಾಗಿ ಹೇಳಿ ಸಂದೇಶಗಳನ್ನು ರವಾನಿಸಿ ಸಾರ್ವಜನಿಕರನ್ನು ಬಲೆಗೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅಧಿಕಾರಿಯ ಹೆಸರನ್ನೇ ದುರುಪಯೋಗಪಡಿಸಿಕೊಂಡು ನಂಬಿಕೆ ಗಳಿಸಿ ಹಣ ದೋಚುವ ಈ ಜಾಲದ ಬಗ್ಗೆ ಪೊಲೀಸರು ತೀವ್ರ ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಕಾರವಾರ, ವಿಜಯಪುರ, ಕೋಲಾರ, ಬೆಂಗಳೂರು ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇದೇ ರೀತಿಯ ದೂರುಗಳು ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ನಾರಾಯಣ ಎಂ. ಅವರು, “ನಾನು ಯಾವುದೇ ಗೃಹೋಪಯೋಗಿ ವಸ್ತುಗಳ ಮಾರಾಟವನ್ನು ಶಿಫಾರಸು ಮಾಡಿಲ್ಲ. ಯಾವುದೇ ವ್ಯಕ್ತಿಯ ಸಂಪರ್ಕ ಸಂಖ್ಯೆಯನ್ನು ಹಂಚಿಕೊಂಡಿಲ್ಲ. ನನ್ನ ಹೆಸರಿನಲ್ಲಿ ಬರುವ ನಕಲಿ ಫೇಸ್ಬುಕ್ ಖಾತೆಗಳು, ಕರೆಗಳು, ಸಂದೇಶಗಳು ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ನಂಬಬೇಡಿ. ಯಾವುದೇ ಹಣಕಾಸಿನ ವ್ಯವಹಾರ ನಡೆಸುವ ಮುನ್ನ ಮಾಹಿತಿಯನ್ನು ಅಧಿಕೃತವಾಗಿ ದೃಢೀಕರಿಸಿಕೊಳ್ಳಿ” ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಯಾರಾದರೂ ಇಂತಹ ವಂಚನೆಗೆ ಒಳಗಾಗಿದ್ದರೆ ತಕ್ಷಣ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು ಅಥವಾ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಸಾರ್ವಜನಿಕರು ಎಚ್ಚರಿಕೆ ವಹಿಸಿದರೆ ಮಾತ್ರ ಇಂತಹ ಸೈಬರ್ ವಂಚನೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.



