Uncategorized
ಯೆಳ್ಳೂರಿನಿಂದ ಪಂಢರಪುರಕ್ಕೆ ಹೊರಟ 16ನೇ ವರ್ಷದ ಭವ್ಯ ದಿಂಡಿ ಪಾದಯಾತ್ರೆ: ಟೋಲ್ ಮುಕ್ತ ಸಂಚಾರಕ್ಕೆ ಹೆಬ್ಬಾಳ್ಕರ್ ಕುಟುಂಬದ ಸಾಥ್!

ಯೆಳ್ಳೂರಿನಿಂದ ಪಂಢರಪುರಕ್ಕೆ ಹೊರಟ 16ನೇ ವರ್ಷದ ಭವ್ಯ ದಿಂಡಿ ಪಾದಯಾತ್ರೆ: ಟೋಲ್ ಮುಕ್ತ ಸಂಚಾರಕ್ಕೆ ಹೆಬ್ಬಾಳ್ಕರ್ ಕುಟುಂಬದ ಸಾಥ್!
ಆಷಾಢ ವಾರಿ ನಿಮಿತ್ತ ಬೆಳಗಾವಿ ತಾಲೂಕಿನ ಯೆಳ್ಳೂರಿನ ವೈಷ್ಣವ ಸದನ ಆಶ್ರಮದ ವತಿಯಿಂದ ಪಂಢರಪುರಕ್ಕೆ ಹಮ್ಮಿಕೊಳ್ಳಲಾಗಿರುವ ಭವ್ಯ ವಾರಿ ಪಾದಯಾತ್ರೆಯು ಯಶಸ್ವಿಯಾಗಿ ಮುನ್ನಡೆದಿದೆ. ನೂರಾರು ಮಾವುಲಿ ಭಕ್ತರ ಜಯಘೋಷದೊಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿರುವ ಈ ಪಾದಯಾತ್ರೆಗೆ ಹೆಬ್ಬಾಳ್ಕರ್ ಕುಟುಂಬಸ್ಥರು ಹಾಗೂ ಹಲವು ಗಣ್ಯರು ಭಾಗವಹಿಸಿ ಶುಭ ಹಾರೈಸಿದ್ದಾರೆ.
ಮೌನಾನಂದ ತುಕಾರಾಂ ಮಹಾರಾಜ್ ಮುರಗೋಡ ಅವರ ಸಂಸ್ಥಾಪಕತ್ವದಲ್ಲಿ ಹಾಗೂ ಹರಿಭಕ್ತ ಪರಾಯಣ ಮಾರುತಿ ಮಹಾರಾಜ್ ಸಾಮ್ರೇಕರ್ ಧಾಮನೆ ಅವರ ಚಾಲಕತ್ವದಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಈ ವಾರಿಯು ಪ್ರಸಕ್ತ ಸಾಲಿನಲ್ಲಿ 16ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ನಿನ್ನೆ ಬೆಳಗ್ಗೆ ಪಾದುಕೆಗಳ ವಿಧಿವಿಧಾನದ ಪೂಜೆ ನೆರವೇರಿಸಿ ಯೆಳ್ಳೂರು ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಲಾಗಿತ್ತು. ಇಂದು ಎರಡನೇ ದಿನದ ಪಾದಯಾತ್ರೆ ಮುಂದುವರಿದಿದ್ದು, 90 ವರ್ಷದ ಹಿರಿಯರಿಂದ ಹಿಡಿದು ಸಣ್ಣ ಮಕ್ಕಳವರೆಗೆ ನೂರಾರು ಮಾವುಲಿ ಭಕ್ತರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಭೇಟಿ ನೀಡಿದ ಕಾಂಗ್ರೆಸ್ ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ಅವರು ಪಾದಯಾತ್ರಿಗಳಿಗೆ ಶುಭ ಹಾರೈಸಿದರು. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ, ರೈತರು, ಮಕ್ಕಳು ಸೇರಿದಂತೆ ಎಲ್ಲರ ಆರೋಗ್ಯ ಉತ್ತಮವಾಗಿರಲಿ ಮತ್ತು ಬೆಳಗಾವಿ ಜಿಲ್ಲೆ, ಕರ್ನಾಟಕ ಹಾಗೂ ಮಹಾರಾಷ್ಟ್ರದಾದ್ಯಂತ ಎಲ್ಲರಿಗೂ ಒಳಿತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವಂತೆ ವಾರಕರಿಗಳಲ್ಲಿ ಕೋರಿದರು. ಅಲ್ಲದೆ, ಪ್ರತಿ ವರ್ಷ ಪ್ರೀತಿಯಿಂದ ಪರಸ್ಪರ ಭಾಗಿಯಾಗುವುದು ನಮ್ಮ ಕುಟುಂಬದ ಪರಂಪರೆಯಾಗಿದೆ ಎಂದು ಸ್ಮರಿಸಿದ ಅವರು, ಮುಂದಿನ ಬಾರಿ ಪಾದಯಾತ್ರೆಗೆ ಹೋಗುವಾಗ ತಮ್ಮನ್ನೂ ಜೊತೆಗೆ ಕರೆದೊಯ್ಯುವಂತೆ ವಿನಂತಿಸಿಕೊಂಡರು.
ಕಳೆದ ವರ್ಷ ದಿಂದಿ ಪಾದಯಾತ್ರೆ ವೇಳೆ ಟೋಲ್ ನಾಕಾಗಳಲ್ಲಿ ವಾಹನಗಳ ಸಂಚಾರಕ್ಕೆ ಸಾಕಷ್ಟು ತೊಂದರೆ ಎದುರಾಗಿತ್ತು. ಇದನ್ನು ಮನಗಂಡು ಈ ಬಾರಿ ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ದಿಂದಿ ಸಮಿತಿಯ ಕೋರಿಕೆಯ ಮೇರೆಗೆ ನಾಯಕರ ವಿಶೇಷ ಸಹಕಾರ ಮತ್ತು ಪತ್ರದ ಮೂಲಕ ಈ ಬಾರಿ ಟೋಲ್ ನಾಕಾಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ವಾಹನಗಳು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ದಿಂದಿ ಪಾದಯಾತ್ರಿಗಳ ಸಮಿತಿಯು ಹೆಬ್ಬಾಳ್ಕರ್ ಕುಟುಂಬಕ್ಕೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದೆ.



