Uncategorized
ಕುರಿ ಕಾಯ್ದ ಪುಟ್ಟರಾಜ ವೈದ್ಯನಾಗುವ ಸಾಧನೆಯತ್ತ ಹೆಜ್ಜೆ

ಕುರಿ ಕಾಯ್ದ ಪುಟ್ಟರಾಜ ವೈದ್ಯನಾಗುವ ಸಾಧನೆಯತ್ತ ಹೆಜ್ಜೆ
ಕೊಪ್ಪಳದ ಮೆಡಿಕಲ್ ಕಾಲೇಜಿನಿಂದ ಕೇವಲ 3 ಕಿ.ಮೀ ದೂರದ ಅಡವಿಯಲ್ಲಿರುವ ಪುಟ್ಟ ಮನೆಯಲ್ಲಿ ಬೆಳೆದ ಈ ಪುಟ್ಟರಾಜ ತಾನು ವೈದ್ಯನಾಗುವ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾನೆ.
ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಅಧ್ಯಯನದಿಂದ ಪುಟ್ಟರಾಜ ನೀಟ್ ಪರೀಕ್ಷೆಯಲ್ಲಿ ಎಸ್ ಟಿ ವಿಭಾಗದಲ್ಲಿ ದೇಶಕ್ಕೆ 694ನೇ ರ‌್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಪುಟ್ಟರಾಜ್ ಅವರ ಮನೆಗೆ ಸಮರ್ಪಕ ವಿದ್ಯುತ್ ಸೌಲಭ್ಯ ಇಲ್ಲ. ಆದರೂ ಯಾವುದೇ ಸವಾಲಿಗೂ ಮಣಿಯದೆ ಓದಿನಲ್ಲಿ ತೊಡಗಿಸಿಕೊಂಡು, ಕಾಲೇಜಿಗೆ ರಜೆ ಸಿಕ್ಕಾಗ ಮನೆಗೆ ಬಂದು ಕುರಿ ಕಾಯುವುದು ಹಾಗೂ ಮನೆ ಕೆಲಸಗಳಲ್ಲಿ ಪಾಲ್ಗೊಂಡು ಕಷ್ಟಗಳ ನಡುವೆಯೂ ವೈದ್ಯನಾಗುವ ಗುರಿಯನ್ನು ಕೈಬಿಡದೆ ನಿರಂತರ ಅಧ್ಯಯನ ನಡೆಸಿ ಈ ಸಾಧನೆ ಮಾಡಿದ್ದಾರೆ.
ಪುಟ್ಟರಾಜ್ ಎರಡನೇ ತರಗತಿವರೆಗೆ ಹನುಮನಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡಿ, 3-4 ನೇ ತರಗತಿ ಬೇವೂರಿನ ಶಾಲೆಯಲ್ಲಿ ಓದುತ್ತ ಅಲ್ಲಿಯೆ ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು.
ನಂತರ ಗಂಗಾವತಿಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ನೀಟ್ ಪರೀಕ್ಷೆಗೆ ಸಜ್ಜಾದರು. ಆರ್ಥಿಕ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ನಡುವೆಯೂ ಧೃತಿಗೆಡದೆ, ಭಯವಿಲ್ಲದೆ ಮತ್ತು ಆತ್ಮವಿಶ್ವಾಸದಿಂದ ಓದಿದ ಪುಟ್ಟರಾಜ ಇಂದು ವೈದ್ಯನಾಗುವ ಕನಸಿನ ಬಾಗಿಲಲ್ಲಿ ನಿಂತಿದ್ದಾರೆ.
ಪುಟ್ಟರಾಜ ಸಾಧನೆಯ ಹಿಂದೆ ತಂದೆ ಮಹಾಬಳೇಶ ಹಾಗೂ ತಾಯಿ ಸಾವಿತ್ರಿ ಅವರ ತ್ಯಾಗ ಮತ್ತು ಪ್ರೋತ್ಸಾಹ ಪ್ರಮುಖವಾಗಿದೆ. ಕಷ್ಟಪಟ್ಟು ಕೃಷಿ ಮಾಡುತ್ತ ಮಗನ ಶಿಕ್ಷಣಕ್ಕೆ ಬೆಂಬಲ ನೀಡಿದ ಪೋಷಕರ ಶ್ರಮಕ್ಕೆ ಇಂದು ಫಲ ದೊರೆತಿದ್ದು, ಅವರ ಸಾಧನೆ ಇತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.



