Uncategorized

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಗಡಾದ ಅವರಿಗೆ ಜಿಲ್ಲಾಡಳಿತ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಬೆಳಗಾವಿ: ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ವೇಳೆ ಅತ್ಯಂತ ಗಂಭೀರ ಮಟ್ಟದ ವಿಐಪಿ ಶಿಷ್ಟಾಚಾರ ಹಾಗೂ ವೈದ್ಯಕೀಯ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಗಡಾದ ಅವರಿಗೆ ಜಿಲ್ಲಾಡಳಿತ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಜುಲೈ 9ರಂದು ಬೆಳಗಾವಿಯಲ್ಲಿ ನಡೆದ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಸಿಎಂ ಡಿಕೆ ಶಿವಕುಮಾರ್‌  ಆಗಮಿಸಿದ್ದರು. ಪ್ರವಾಸದ ವೇಳೆ ಸರ್ಕಾರದ ಸ್ಪಷ್ಟ ನಿರ್ದೇಶನಗಳಿದ್ದರೂ ತೀವ್ರ ಕರ್ತವ್ಯ ಲೋಪ ಎಸಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಸರ್ಕಾರದ ನಿಯಮಾವಳಿ ಪ್ರಕಾರ ಸಿಎಂ ಪ್ರವಾಸದಲ್ಲಿದ್ದಾಗ ಅತ್ಯಾಧುನಿಕ ಜೀವ ರಕ್ಷಕ ಉಪಕರಣಗಳಿರುವ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ಅಂಬುಲೆನ್ಸ್‌ ಹಾಗೂ ತಜ್ಞ ವೈದ್ಯರ ತಂಡವನ್ನು ಕಡ್ಡಾಯವಾಗಿ ನೇಮಿಸಬೇಕಿತ್ತು. ಆದರೆ ಡಿಹೆಚ್‌ಒ ಕೇವಲ ಸಾಮಾನ್ಯ ಅಂಬುಲೆನ್ಸ್‌ ನಿಯೋಜಿಸಿ ಮುಖ್ಯಮಂತ್ರಿಗಳ ಆರೋಗ್ಯ ಭದ್ರತೆ ಜೊತೆ ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಿಎಂ ವಾಸ್ತವ್ಯ ಹೂಡಿದ್ದ ಸ್ಥಳದಲ್ಲಿ ಹಿರಿಯ ತಜ್ಞ ವೈದ್ಯರನ್ನು ಕರ್ತವ್ಯಕ್ಕೆ ಹಾಕುವ ಬದಲು, ಪಿಜಿ (ವೈದ್ಯಕೀಯ ಸ್ನಾತಕೋತ್ತರ) ವಿದ್ಯಾರ್ಥಿಗಳನ್ನು ನೇಮಿಸಿ ಪ್ರೋಟೋಕಾಲ್ ಉಲ್ಲಂಘಿಸಲಾಗಿತ್ತು. ಪ್ರವಾಸದ ಅವಧಿಯಲ್ಲಿ ವೈದ್ಯಕೀಯ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರದೆ ಹಾಗೂ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಪರಿಶೀಲನೆಯ ವೇಳೆ ಮುಖ್ಯಮಂತ್ರಿಗಳ ಸುರಕ್ಷತೆಗೆ ಅಗತ್ಯವಿದ್ದ ಕನಿಷ್ಠ ಸೌಲಭ್ಯಗಳನ್ನೂ ಒದಗಿಸದೇ ಇರುವುದು ಸ್ಪಷ್ಟವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು 7 ದಿನಗಳ ಒಳಗೆ ಸೂಕ್ತ ಹಾಗೂ ಸಮರ್ಪಕ ವಿವರಣೆ ನೀಡದಿದ್ದರೆ, ಸೇವೆಯಿಂದ ಅಮಾನತು ಸೇರಿದಂತೆ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button