Uncategorized
ಪಡಿತರ ಅಕ್ಕಿ ಮಾರಾಟ–ಖರೀದಿಗೆ ಕಠಿಣ ಕ್ರಮ: ಆಹಾರ ಇಲಾಖೆ ಎಚ್ಚರಿಕೆ

ಕಾರವಾರ: ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುವವರು ಹಾಗೂ ಖರೀದಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಎಚ್ಚರಿಕೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 15,819 ಅಂತ್ಯೋದಯ ಅನ್ನ ಯೋಜನೆ (AAY) ಹಾಗೂ 2,88,920 ಆದ್ಯತಾ ಪಡಿತರ ಚೀಟಿಗಳು ಸೇರಿದಂತೆ ಒಟ್ಟು 3,04,739 ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ–2013ರಡಿ ಪಡಿತರ ಅಕ್ಕಿ ವಿತರಿಸಲಾಗುತ್ತಿದೆ.
ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು 35 ಕೆಜಿ ಪಡಿತರ ಅಕ್ಕಿ, ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಯೂನಿಟ್‌ಗೆ 5 ಕೆಜಿ ಪಡಿತರ ಅಕ್ಕಿ ಹಾಗೂ ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಹೆಚ್ಚುವರಿಯಾಗಿ ಪ್ರತಿ ಯೂನಿಟ್‌ಗೆ 5 ಕೆಜಿ ಪಡಿತರ ಅಕ್ಕಿ ನೀಡಲಾಗುತ್ತಿದೆ.
ಈ ಪಡಿತರ ಅಕ್ಕಿಯನ್ನು ಫಲಾನುಭವಿಗಳು ತಮ್ಮ ಸ್ವಂತ ಬಳಕೆಗಾಗಿ ಮಾತ್ರ ಬಳಸಬೇಕು. ಮಾರಾಟ ಮಾಡುವುದು ಅಥವಾ ದುರುಪಯೋಗಪಡಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ. ಒಂದು ವೇಳೆ ಪಡಿತರ ಅಕ್ಕಿ ಮಾರಾಟ ಮಾಡಿರುವುದು ಕಂಡುಬಂದರೆ ಸಂಬಂಧಿತ ಪಡಿತರ ಚೀಟಿದಾರರ ವಿರುದ್ಧ ಸರ್ಕಾರದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಅದೇ ರೀತಿ, ಆಹಾರ ಇಲಾಖೆ ಅಧಿಕಾರಿಗಳ ತಪಾಸಣೆ ವೇಳೆ ಅನಧಿಕೃತವಾಗಿ ಪಡಿತರ ಅಕ್ಕಿ ಸಂಗ್ರಹಣೆ, ಸಾಗಣೆ ಅಥವಾ ಪಡಿತರ ಚೀಟಿದಾರರಿಂದ ಪಡಿತರ ಅಕ್ಕಿ ಖರೀದಿ ಮಾಡಿರುವುದು ಪತ್ತೆಯಾದರೆ, ಸಂಬಂಧಪಟ್ಟವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ, 1955ರಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರು ಅಥವಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು, ಕಾರವಾರ ಅವರನ್ನು ನೇರವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.



