
ಬೆಂಗಳೂರು: ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ರದ್ದುಗೊಳಿಸಿ ಜಿ ರಾಮ್ ಜಿ ಎಂದು ಪುನರ್ನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಕಾನೂನು ಹೋರಾಟ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾತನಾಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್, “ಸಂಪುಟ ಸಭೆಯಲ್ಲಿ ಮನರೇಗಾ ರದ್ದು ಬಗ್ಗೆ ಚರ್ಚೆ ಆಗಿದೆ. ನರೇಗಾ ರದ್ದು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನ ಮಾಡಲಾಗಿದೆ. ಈ ವಿಚಾರವನ್ನು ಹೋರಾಟದ ಮೂಲಕ ಜನರ ಬಳಿಯೂ ಕೊಂಡೊಯ್ಯಲಿದ್ದೇವೆ. ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನಲ್ಲಿ ಅರ್ಜಿ ಹಾಕಬೇಕೋ ಎಂಬ ಬಗ್ಗೆ ಎಜಿ ಅವರೊಂದಿಗಿನ ಪರಾಮರ್ಶೆಯ ಬಳಿಕ ತೀರ್ಮಾನ ಮಾಡಲಾಗುವುದು” ಎಂದರು.


