ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ವೇಳೆ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಬಸವರಾಜ ತಿರ್ಲಾಪೂರ ಅವರ ಮನೆಯ ಮಹಡಿಯ ಮೇಲೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಚಿರತೆ ಕಂಡು ಬಂದಿರುವುದು ಸ್ಪಷ್ಟವಾಗಿದ್ದು, ಚಿಂತೆ ಹೆಚ್ಚಿಸಿದೆ.
ಗುರುವಾರ ಸಂಜೆ ಗ್ರಾಮದ ಒಳಗೆ ನುಗ್ಗಿದ ಚಿರತೆ ಮಹಡಿ ಮನೆಗಳ ಮೇಲೆ ಜಿಗಿಯುತ್ತ ಸಾಗಿದೆ. ಈ ವೇಳೆ ಬಸವರಾಜ ತಿರ್ಲಾಪೂರ ಅವರು ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಚಿರತೆ ಹೋಗಿದೆ. ಆ ಸಂದರ್ಭದಲ್ಲಿ ನಾಯಿ ಎಂದುಕೊಂಡು ಮಾತು ಮುಂದುವರಿಸಿದ್ದಾರೆ. ನಂತರ ಸಂಶಯ ಬಂದು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ಓಡಾಟ ನಡೆಸಿರುವುದು ಖಚಿತವಾಗಿದೆ.
ಕಪ್ಪತಗುಡ್ಡ ಹಾಗೂ ಬಿಂಕದಕಟ್ಟಿ ಮೃಗಾಲಯಕ್ಕೆ ಹೊಂದಿಕೊಂಡಿರುವ ಬಿಂಕದಕಟ್ಟಿ, ಅಸುಂಡಿ, ಮಲ್ಲಸಮುದ್ರ, ನಾಗಾವಿ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ, ತೋಳ, ನರಿಗಳ ಓಡಾಟ ಹೆಚ್ಚಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಸಿಸಿ ಕ್ಯಾಮೆರಾದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದ್ದು, ರಾತ್ರಿ ಮನೆಯಿಂದ ಹೊರಗಡೆ ಬರದಂತೆ ಎಚ್ಚರಿಕೆ ವಹಿಸಲಾಗಿದೆ.