ಬೆಳಗಾವಿರಾಜಕೀಯರಾಜ್ಯ

ಬಿಮ್ಸ್‌: ಶೇ 40ರಷ್ಟು ವೈದ್ಯರೇ ಇಲ್ಲ

ಬಿಮ್ಸ್‌: ಶೇ 40ರಷ್ಟು ವೈದ್ಯರೇ ಇಲ್ಲ

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಹತ್ತು ವರ್ಷಗಳಿಂದ ವೈದ್ಯರ ಸಂಖ್ಯೆ ಮಾತ್ರ ಅಷ್ಟೇ ಇದೆ. ಈಗಲೂ ಶೇ 40ರಷ್ಟು ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ.

240 ವೈದ್ಯ ಹುದ್ದೆಗಳು ಮಂಜೂರಾಗಿದ್ದು, 170 ಮಂದಿ ಮಾತ್ರ ಇದ್ದಾರೆ.

ಇನ್ನೂ 40 ಹುದ್ದೆಗಳ ಮಂಜೂರಾತಿ ಬಾಕಿ ಇದೆ.

ಕೋವಿಡ್‌ಗಿಂತ ಮುಂಚೆ ಪ್ರತಿ ದಿನ 600ರಿಂದ 700 ಜನ ಹೊರರೋಗ ವಿಭಾಗಕ್ಕೆ ಬರುತ್ತಿದ್ದರು. ಈಗ 1,600ರಿಂದ 1,800 ಮಂದಿ ಚಿಕಿತ್ಸೆಗೆ ಬರುತ್ತಿದ್ದಾರೆ. ನಾಲ್ಕು ವರ್ಷಗಳಲ್ಲಿ ರೋಗಿಗಳ ಸಂಖ್ಯೆ ಮೂರು ಪಟ್ಟು ಏರಿಕೆಯಾಗಿದೆ.

ಒಳರೋಗಿಗಳ ವಿಭಾಗದಲ್ಲಿ 1,040 ಬೆಡ್‌ಗಳಿದ್ದು, 940 ಬೆಡ್‌ ಯಾವಾಗಲೂ ಭರ್ತಿಯಾಗಿರುತ್ತವೆ. 150 ಐಸಿಯು ಬೆಡ್‌ಗಳಿದ್ದರೂ ಸಾಲುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ತರಿಸಲಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದ ರೋಗಿಗಳು ಈಗ ಇತ್ತ ಮುಖ ಮಾಡಿದ್ದಾರೆ.

ಮೆಡಿಸಿನ್‌ ವಿಭಾಗ, ಅರಿವಳಿಕೆ ವಿಭಾಗ, ರೇಡಿಯಾಲಜಿ, ಕಿವಿ- ಮೂಗು- ಗಂಟಲು, ಹೆರಿಗೆ, ಚರ್ಮರೋಗ, ಐಸಿಯು, ಎಲುಬು- ಕೀಲು, ಮಕ್ಕಳ ವಿಭಾಗದಲ್ಲಿ ಒಬ್ಬಿಬ್ಬರು ವೈದ್ಯರು ಮಾತ್ರ ಇದ್ದಾರೆ. ಇಲ್ಲಿ ತಲಾ ಐವರು ವೈದ್ಯರ ಅವಶ್ಯಕತೆ ಇದೆ. ಚರ್ಮರೋಗ ವಿಭಾಗದಲ್ಲಿ ಇಬ್ಬರೇ ತಜ್ಞರಿದ್ದಾರೆ.

ಇದರಿಂದ ರೋಗಿಗಳು ಇಡೀ ದಿನ ಕಾದು ಕುಳಿತುಕೊಳ್ಳಬೇಕಿದೆ. ವೈದ್ಯರಿಗೆ ಕರ್ತವ್ಯದ ಭಾರ ಹೆಚ್ಚಾಗಿದೆ.

ನರರೋಗ ವಿಭಾಗದಲ್ಲಿ ಒಬ್ಬ ವೈದ್ಯರೂ ಇಲ್ಲ. ಮಿದುಳಿನ ಸಮಸ್ಯೆ ಅಥವಾ ಅಪಘಾತಗಳು ಸಂಭವಿಸಿದಾಗ ತಲೆಗೆ ಪೆಟ್ಟಾದ ರೋಗಿಗಳಿಗೆ ಇಲ್ಲಿ ಚಿಕಿತ್ಸೆಯೇ ಸಿಗುತ್ತಿಲ್ಲ. ಅಂಥವರು ಖಾಸಗಿ ಆಸ್ಪತ್ರೆ ಅಥವಾ ಹುಬ್ಬಳ್ಳಿಯ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು.

‘ಕೋವಿಡ್‌ ನಂತರ ಖಾಸಗಿ ಆಸ್ಪತ್ರೆಗಳು ಹೆಚ್ಚಾಗಿವೆ. ಕ್ಲಿನಿಕ್‌ಗಳಲ್ಲೂ ಸಾಕಷ್ಟು ಪ್ರಕಾರದ ಚಿಕಿತ್ಸೆ ಸಿಗುತ್ತಿದೆ. ಹೀಗಾಗಿ, ವೈದ್ಯರು ಸರ್ಕಾರಿ ಸೇವೆಗೆ ಬರಲು ಒಪ್ಪುತ್ತಿಲ್ಲ. ಬಿಮ್ಸ್‌ನಲ್ಲಿ ಈಗ ಸಹಾಯಕ ಪ್ರಾಧ್ಯಾಪಕರಿಗೆ ₹1.20 ಲಕ್ಷ, ಸಹ ಪ್ರಾಧ್ಯಾಪಕರಿಗೆ ₹1.50 ಲಕ್ಷ ವೇತನವಿದೆ. ಆದರೂ ವೈದ್ಯರು ಬರಲು ಒಪ್ಪುತ್ತಿಲ್ಲ’ ಎಂಬುದು ಅಧಿಕಾರಿಗಳ ಮಾಹಿತಿ.

ಇಸಿಜಿ- ಎಕ್ಸ್‌ರೇ, ಎಂ.ಆರ್‌, ಮೆಡಿಕಲ್‌ ರೆಕಾರ್ಡ್‌ ತಂತ್ರಜ್ಞರು, ಪ್ರಯೋಗಾಲಯ ಸಹಾಯಕ, ಡಿ ಗ್ರೂಪ್‌ ಸಿಬ್ಬಂದಿ ಕೂಡ ಕಡಿಮೆ ಇದ್ದಾರೆ. ಆಡಳಿತ ವಿಭಾಗದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದಾರೆ. ಇದರಿಂದ ಆಸ್ಪತ್ರೆಯ ಆಡಳಿತ ನಿರ್ವಹಣೆಗೆ ತೊಡಕಾಗಿದೆ ಎಂಬುದು ಅಧಿಕಾರಿಗಳ ಗೋಳು.

ಜಿಲ್ಲಾಸ್ಪತ್ರೆ ಆವರಣದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧಗೊಂಡು ಮೂರು ವರ್ಷ ಕಳೆದರೂ ಜನರಿಗೆ ಪ್ರಯೋಜನವಾಗಿಲ್ಲ.

ಇದಕ್ಕೆ ₹190 ಕೋಟಿ ಹಣ ಸುರಿಯಲಾಗಿದೆ. 8 ಶಸ್ತ್ರಚಿಕಿತ್ಸಾ ಕೊಠಡಿಗಳು, ತೀವ್ರ ನಿಗಾ ಘಟಕ, ಕಾರ್ಡಿಯಾಲಜಿ, ಯುರಾಲಜಿ, ನೆಫ್ರಾಲಜಿ, ತಾಯಿ- ಮಕ್ಕಳ ವಿಶೇಷ ಘಟಕ ಸೇರಿ 11 ವಿಭಾಗಗಳು ಇಲ್ಲಿವೆ.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಖಾಲಿ ಕಟ್ಟಡವನ್ನೇ ಉದ್ಘಾಟಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ, ಪೀಠೋಪಕರಣ, ವೈದ್ಯಕೀಯ ಸಲಕರಣೆಗಳ ಖರೀದಿಗೆ ಇದುವರೆಗೆ ಬಿಡಿಗಾಸು ಅನುದಾನ ಬಂದಿಲ್ಲ.

‘ಕಳೆದ 16 ವರ್ಷಗಳಿಂದ ಬಿಮ್ಸ್‌ನಲ್ಲಿ ಸ್ನಾತಕೋತ್ತರ ಪದವಿ ವಿಭಾಗ ಇರಲಿಲ್ಲ. ನಿರಂತರ ಪ್ರಯತ್ನದ ಬಳಿಕ ಕಳೆದ ವರ್ಷ ಆರಂಭಿಸಲಾಗಿದೆ. ಈಗ 68 ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಇದ್ದಾರೆ. ಅವರನ್ನೇ ಬಳಸಿಕೊಂಡು ವೈದ್ಯರ ಕೊರತೆ ನೀಗಿಸಲಾಗುತ್ತಿದೆ’ ಎಂದು ಬಿಮ್ಸ್‌ ನಿರ್ದೇಶಕ ಡಾ.ಅಶೋಕ ಕುಮಾರ ಶೆಟ್ಟಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button