
ಬೆಳಗಾವಿ: ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಕುರಿತು ಬೆಳಗಾವಿಯಲ್ಲಿಂದು ಶಾಸಕ ವಿನಯ ಕುಲಕರ್ಣಿ ಪ್ರತಿಕ್ರಿಯಿಸಿದ್ದು, ನ್ಯಾಯಾಲಯದ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ. ಶುಕ್ರವಾರ ನಾನು ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾಗುತ್ತೇನೆ. ಮುಂದೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದರು.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿರುವ ಆರೋಪಕ್ಕೆ, ಅದು ಸಹಜವಾಗಿ ಇದ್ದೇ ಇರುತ್ತದೆ. ಬಲಿಷ್ಠ ನಾಯಕರ ಹಿಂದೆ ಈ ರೀತಿ ಕುತಂತ್ರ ಮಾಡುವುದು ಸಹಜ. ಇದಕ್ಕೆ ಏನು ಮಾಡೋಕೆ ಆಗುವುದಿಲ್ಲ, ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ನನ್ನ ಪಕ್ಷ, ಕ್ಷೇತ್ರದ ಜನರು ಜೊತೆಗಿದ್ದಾರೆ. ಪತ್ನಿ, ಮಕ್ಕಳು ಹೊರಗಡೆ ಇದ್ದು ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಹಾಗಾಗಿ, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ. ಕೇಸ್ ಏನಾಗುತ್ತದೆ ನೋಡುತ್ತೇನೆ. ನನಗೆ ಸಚಿವ ಸ್ಥಾನ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.
ನನ್ನ ವಿರುದ್ಧ ಕುತಂತ್ರ ಮಾಡಿದವರಿಗೆ ಸಂದೇಶ ಕೊಡುವ ಅವಶ್ಯಕತೆ ಇಲ್ಲ. ನನ್ನ ವಿರೋಧಿಗಳಿಗೆ ಕಾಲವೇ ಉತ್ತರಿಸುತ್ತದೆ. ಕಾಲಾಯ ತಸ್ಮೈ ನಮಃ ಎಂದಷ್ಟೇ ಎಂದು ಹೇಳಿದರು.