
ಸೂಕ್ಷ್ಮ ಸನ್ನಿವೇಶದ ಹಿನ್ನೆಲೆ ರಾಜ್ಯದ ಪೊಲೀಸರಿಗೆ ರಜೆ ಮಂಜೂರು ಮಾಡುವುದಕ್ಕೆ ಹೋಗುವುದಿಲ್ಲ.. ಪರಿಸ್ಥಿತಿ ಸಾಮಾನ್ಯಕ್ಕೆ ಬಂದಿರುವುದನ್ನು ಕೇಂದ್ರ ಸರ್ಕಾರ ನಮಗೆ ತಿಳಿಸುವ ವರೆಗೂ ನಾವು ಸೂಕ್ಷ್ಮವಾಗಿರಬೇಕು. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ನೀರು, ಆಹಾರ, ಆರೋಗ್ಯ ಸೌಲಭ್ಯಗಳ ಸನ್ನದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದರು.
ಶನಿವಾರ ಬೆಂಗಳೂರಿನಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಯುದ್ಧ ಮುಂದುವರಿದಿದೆ. ಉಗ್ರರ ವಿರುದ್ಧ ಭಾರತೀಯ ಸೇನಾ ಪಡೆ ಕ್ರಮ ತೆಗೆದುಕೊಂಡಿದೆ. ಈ ಪರಿಸ್ಥಿತಿ ಹೆಚ್ಚಾದರೆ ಯುದ್ದದ ಪರಿಸ್ಥಿತಿ ಬರಬಹುದು ಎಂಬುದನ್ನು ಕೇಂದ್ರ ಸರ್ಕಾರ ಪ್ರತಿಯೊಂದು ರಾಜ್ಯ ಸರ್ಕಾರಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಸಲಹೆಯಂತೆ, ರಾಜ್ಯಾದ್ಯಂತ, ವಿಶೇಷವಾಗಿ ಕರಾವಳಿ, ಬೆಂಗಳೂರು, ರಾಯಚೂರಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ನೀರು, ಆಹಾರ, ಆರೋಗ್ಯ ಸೌಲಭ್ಯಗಳ ಸನ್ನದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಸದ್ಯ ಪೊಲೀಸ್ ಇಲಾಖೆಗೆ ಯಾವುದೇ ರಜೆ ನೀಡಲಾಗುವುದಿಲ್ಲ ಮತ್ತು ಕೇಂದ್ರದ ಮುಂದಿನ ಸೂಚನೆಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು, ಕರಾವಳಿಯಲ್ಲಿ ನೌಕಾಪಡೆ ಮತ್ತು ಕೈಗಾ ಪೊಲೀಸರು ಸೇರಿದಂತೆ ಎಲ್ಲಾ ಕಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಸುರಕ್ಷತೆ ಕೈಗೊಂಡಿದ್ದೇವೆ. ಪ್ರತಿಯೊಂದು ನಗರ, ಪಟ್ಟಣದಲ್ಲಿ ಜಾಗೃತಿ ವಹಿಸಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು. ಪೊಲೀಸರಿಗೆ ರಜೆ ಕೊಡುವುದಿಲ್ಲ. ಸೂಕ್ಷ್ಮ ಸನ್ನಿವೇಶ ಇರುವುದರಿಂದ ಪೊಲೀಸರಿಗೆ ರಜೆ ಮಂಜೂರು ಮಾಡುವುದಕ್ಕೆ ಹೋಗುವುದಿಲ್ಲ. ಸದ್ಯಕ್ಕೆ ಯಾವುದೇ ರಜೆ ಇಲ್ಲ. ಪರಿಸ್ಥಿತಿ ಸಾಮಾನ್ಯಕ್ಕೆ ಬಂದಿರುವುದನ್ನು ಕೇಂದ್ರ ಸರ್ಕಾರ ನಮಗೆ ತಿಳಿಸುತ್ತದೆ. ಅಲ್ಲಿಯವರೆಗೂ ನಾವು ಸೂಕ್ಷ್ಮವಾಗಿರಬೇಕು ಎಂದು ತಿಳಿಸಿದರು.
ರಾಜ್ಯದ ಕರಾವಳಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಕರಾವಳಿಯಲ್ಲಿ ಬಿಗಿ ಭದ್ರತೆ ವಹಿಸಿದ್ದೇವೆ. ಮಂಗಳೂರು, ಉತ್ತರ ಕನ್ನಡದಲ್ಲಿ ನಿಗಾ ವಹಿಸಲಾಗಿದೆ. ಪೊಲೀಸ್ ಇಲಾಖೆ ಎಲ್ಲಾ ಕ್ರಮ ವಹಿಸಿದೆ. ನೇವಿ ಅವರು ಕೂಡ ಭದ್ರತೆ ವಹಿಸಿದ್ದಾರೆ. ನಮ್ಮ ಬಾರ್ಡರ್ ಒಳಗೆ ಸೆಕ್ಯೂರಿಟಿ ಇದೆ. ಆ ಮಾಹಿತಿ ನಮಗೆ ಬಂದಿಲ್ಲ. ಕೇಂದ್ರದವರು ಏನಾದರೂ ಇದ್ದರೆ ಹೇಳುತ್ತಾರೆ ಎಂದರು.