ತುಂಬು ಗರ್ಭಿಣಿ ಪತ್ನಿ, ಮಕ್ಕಳ ಮದುವೆಗೆ ಅಪ್ಪ – ಅವ್ವ ಹೆಣ್ಣು ಹುಡುಕುತ್ತಿದ್ದರು:ಇನಾಮದಾರ ಕಾರ್ಖಾನೆ ದುರಂತದ ಕಣ್ಣೀರಿನ ಕಥೆಯಿದು!

ಬೆಳಗಾವಿ: ಬೈಲಹೊಂಗಲ ತಾಲೂಕಿನ ಮರಕುಂಬಿಯ ಇನಾಮದಾರ ಸಕ್ಕರೆ ಕಾರ್ಖಾನೆ ದುರಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದರಿಂದ ದುರಂತದಲ್ಲಿ ಗಾಯಗೊಂಡಿದ್ದ ಎಲ್ಲ 8 ಕಾರ್ಮಿಕರು ಮೃತಪಟ್ಟಂತೆ ಆಗಿದೆ.
ಗೋಕಾಕ ತಾಲೂಕಿನ ಗಿಳಿಹೊಸೂರ ಗ್ರಾಮದ ರಾಘವೇಂದ್ರ ಮಲ್ಲಪ್ಪ ಗಿರಿಯಾಳ(36) ಇಂದು ಸಂಜೆ ಮೃತಪಟ್ಟಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆದ ಕೆಲ ಗಂಟೆಯಲ್ಲೆ ಮೂವರು ಕಾರ್ಮಿಕರು ಅಸುನೀಗಿದ್ದರು. ಇಂದು ಬೆಳಗ್ಗೆ ನಾಲ್ವರು ಮತ್ತು ಸಂಜೆ ಮತ್ತೋರ್ವ ಕಾರ್ಮಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮೃತ ಎಂಟೂ ಜನರದ್ದು ಒಂದೊಂದು ಕಣ್ಣೀರಿನ ಕಥೆ ಇದೆ.
ಮೂರು ದಿನ ಕಳೆದಿದ್ದರೆ ಪತ್ನಿಗೆ ಹೆರಿಗೆ ಆಗಿ, ಮಗುವನ್ನು ಆ ಯುವಕ ಎತ್ತಿಕೊಂಡು ಮುದ್ದಾಡಬೇಕಿತ್ತು. ಆದರೆ, ವಿಧಿ ಆತನ ಬಾಳಿಗೆ ಬೆಂಕಿ ಇಟ್ಟಿದೆ. ಇತ್ತ ಕೆಲಸಕ್ಕೆ ಹೋದ ಮಗ ಮನೆಗೆ ಮರಳಿ ಬರುವುದನ್ನೇ ಕಾಯುತ್ತಾ ಕುಳಿತಿದ್ದ ತಂದೆ – ತಾಯಿಗೆ, ಮಗ ಮನೆಗೆ ಬಾರದೇ ಮಸಣಕ್ಕೆ ಹೋಗಿದ್ದು ಬರಸಿಡಿಲು ಬಡಿದಂತಾಗಿದೆ.
ದಡ ಸೇರುವ ಮುನ್ನವೇ ಬಾರದ ಲೋಕಕ್ಕೆ ಪಯಣ: ಒಂದೆಡೆ ಬದುಕಿನಲ್ಲಿ ಹಲವು ಆಸೆ, ಕನಸು, ಗುರಿ ಇಟ್ಟುಕೊಂಡು ಕೆಲಸಕ್ಕೆ ಸೇರಿದ್ದ ಆ ಯುವಕರು ತಮ್ಮ ದಡ ಸೇರುವ ಮುನ್ನವೇ ಬೆಂಕಿಯ ಕೆನ್ನಾಲಿಗೆಯಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮಗನನ್ನು ನೆನೆದು ತಲೆ ತಲೆ ಚಚ್ಚಿಕೊಂಡು ಅಳುತ್ತಿರುವ ತಂದೆ. ಇದೇ ವೇಳೆ ಅಳಿಯನ ಸಾವಿನ ಸುದ್ದಿ ತಿಳಿದು ರಸ್ತೆ ಮೇಲೆ ಹೊರಳಾಡಿ ಕಣ್ಣೀರು ಹಾಕುತ್ತಿರುವ ಮಾವ. ಈ ಎಲ್ಲಾ ಮನಕಲಕುವ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯ ಶವಾಗಾರದ ಮುಂದೆ.
ತುತ್ತಿನ ಚೀಲ ತುಂಬಿಸಿಕೊಳ್ಳಲು ಸಕ್ಕರೆ ಕಾರ್ಖಾನೆಯಲ್ಲಿ ಅವರೆಲ್ಲಾ ಕೆಲಸಕ್ಕೆ ಸೇರಿಕೊಂಡಿದ್ದರು. ಮನೆಗೆ ಆಧಾರಸ್ತಂಭವೇ ಆಗಿದ್ದರು. ಆದರೆ, ವಿಧಿ ಅವರ ಬಾಳನ್ನೇ ಮುಳುಗಿಸಿದೆ. ಇದು ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿ ಇರುವ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದ ಕಣ್ಣೀರಿನ ಕಥೆ ಇದು.
ಇನಾಮದಾರ್ ಸಕ್ಕರೆ ಕಾರ್ಖಾನೆ ವಾಲ್ನಲ್ಲಿ ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಕುದಿಯುತ್ತಿರುವ ದ್ರವ ಪದಾರ್ಥ ಸಿಡಿದು ಎಂಟು ಜನ ಕಾರ್ಮಿಕರ ಇಡೀ ದೇಹವೇ ಸುಟ್ಟು ಕರಕಲಾಗಿತ್ತು. ಗಾಯಗೊಂಡವರು ಚಿಕಿತ್ಸೆ ಫಲಕಾರಿ ಆಗದೇ ಉಸಿರು ಚೆಲ್ಲಿದ್ದಾರೆ. ಇವರಲ್ಲಿ ಬಹುತೇಕರು ಬಡವರೇ ಆಗಿದ್ದು, ಕುಟುಂಬಕ್ಕೆ ಆಧಾರವಾಗಿದ್ದರು. ಇದರಿಂದ ಕುಟುಂಬಸ್ಥರಿಗೆ ದಿಕ್ಕೆ ತೋಚದಂತಾಗಿದೆ.


