ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಡು – ನುಡಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ದಾಖಲಾದ ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲಾ ಮೊಕದ್ದಮೆಯನ್ನು ವಾಪಾಸ್ ಪಡೆಯಲಾಗುವುದು.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. 2023 ಕ್ಕೆ ನಾಮಕರಣ ಆಗಿ 50 ವರ್ಷ ತುಂಬಿದರೂ ಆಗಿನ ಬಿಜೆಪಿ ಸರ್ಕಾರ ಸುವರ್ಣಮಹೋತ್ಸವವನ್ನು ಬೇಕಂತಲೇ ಕೈಬಿಟ್ಟಿತ್ತು. ಆದರೆ ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ತಡವಾದರೂ ಕರ್ನಾಟಕದ ಸುವರ್ಣ ಮಹೋತ್ಸವವನ್ನು ಆರಂಭಿಸಿ ಇಡೀ ವರ್ಷ ಆಚರಿಸಲು ನಿರ್ಧರಿಸಿದೆವು. ಕನ್ನಡ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಇದು ನಮ್ಮ ಬದ್ಧತೆ.
ಕನ್ನಡ ಭಾಷೆ, ಸಂಸ್ಕೃತಿ, ಕಲೆಯ ಬಗ್ಗೆ ರಾಜ್ಯದ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ ಎನ್ನುವುದು ನಮ್ಮ ನಿಮ್ಮೆಲ್ಲರ ಅಭಿಮಾನವಾಗವಾಗಬೇಕು. ಆಗ ಮಾತ್ರ ಕನ್ನಡ ಸಾರ್ವಭೌಮ ಭಾಷೆಯಾಗುತ್ತದೆ.
ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಬಳಸಬೇಕು, ಬೆಳೆಸಬೇಕು, ಬೆಳಗಬೇಕು. ನಾವು ನಮ್ಮ ಸಹೋದರ ಮತ್ತು ಇತರೆ ಭಾಷಿಕರ ಜೊತೆ ಕನ್ನಡದಲ್ಲಿ ಮಾತನಡುವ, ವ್ಯವಹರಿಸುವ ಸಂಸ್ಕೃತಿಯನ್ನು ಪಾಲಿಸಬೇಕು.
ಇತರೆ ಭಾಷೆಯಲ್ಲಿ ತಪ್ಪು ತಪ್ಪಾಗಿ ಮಾತನಾಡುವುದಕ್ಕಿಂತ ನಮ್ಮದೇ ಭಾಷೆಯಲ್ಲಿ ಮಾತಾಡಬೇಕು. ಅಕ್ಕ ಪಕ್ಕದ ಎಲ್ಲಾ ರಾಜ್ಯಗಳಲ್ಲೂ ಆಯಾ ರಾಜ್ಯದ ಜನರಾಡುವ ಭಾಷೆಯೇ ಸಾರ್ವಭೌಮ. ನಮ್ಮಲ್ಲೂ ಇದನ್ನೇ ಆಚರಿಸಬೇಕು.
ಒಂದು ಭಾಷೆ ಮಾತನಾಡುವ ಜನ ಒಂದು ಆಡಳಿತದ ಸೂರಿನಡಿ ಬರಬೇಕು ಎನ್ನುವುದು ಕನ್ನಡ ಏಕೀಕರಣ ಚಳವಳಿಯ ಆಶಯವಾಗಿತ್ತು. ಈ ಆಶಯ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಕನ್ನಡ ಓದುವುದನ್ನು, ಬರೆಯುವುದನ್ನು ಹೆಚ್ಚೆಚ್ಚು ಕಲಿಯಬೇಕು, ಕಲಿಸಬೇಕು.