ಜಾತಿ ಗಣತಿಯಿಂದ ಹಾನಿಯಾಗುತ್ತಿದ್ದರೆ ಪೂರ್ವಾಲೋಚನೆ ಅಗತ್ಯ: ಶಿವಾನಂದ ಪಾಟೀಲ.

ಮಾಜಿ ಸಚಿವ ಶ್ರೀರಾಮುಲು ಅವರಿಗೆ ಅವರ ಪಕ್ಷದಲ್ಲಿ ಏನು ನಡೆದಿದೆ ಎಂಬುದು ಗೊತ್ತಿಲ್ಲ ಎಂಬಂತೆ ಕಾಣುತ್ತಿದೆ ಎಂದು ಜವಳಿ, ಸಕ್ಕರೆ, ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ವ್ಯಂಗ್ಯವಾಡಿದರು. ವಿಜಯಪುರ ನಗರದಲ್ಲಿ ಶನಿವಾರ ಮಾದ್ಯಮಗಳ ಜೊತೆಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿಕೆಶಿ ಮಧ್ಯೆ ಗಲಾಟೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ತಮಗೆ ಗೊತ್ತಿದೆಯಲ್ಲ, ಅದನ್ನು ಮೊದಲು ಶ್ರೀರಾಮುಲು ಅವರು ಸರಿ ಮಾಡಿಕೊಳ್ಳಲಿ ಎಂದರು.
ನಮ್ಮಲ್ಲಿ ಬಹಳ ಜನ ಮುಖ್ಯಮಂತ್ರಿಗಳಾಗಬೇಕು ಎಂಬ ಅಭ್ಯರ್ಥಿಗಳು ಇದ್ದಾರೆ. ತಪ್ಪೇನಿದೆ ಆಸೆ ಪಟ್ಟರೆ, ಆದರೆ ನನಗೆ ಆ ಆಸೆ ಇಲ್ಲ. ನನಗಂತೂ ಇಷ್ಟೇ ಸಾಕು ಎಂದರು. ಇನ್ನೂ ಬಿಜೆಪಿಯವರಿಂದ ಜನಾಕ್ರೋಶ ರ್ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೇನು ಮಾಡಬೇಕು ಮನೆಯಲ್ಲಿ ಕೂಡಬೇಕಾ ?, ನಾವು ಕೂಡ ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿಲ್ಲವಾ ?, ವಿರೋಧ ಪಕ್ಷವಾಗಿ ಕೆಲಸ ಮಾಡುವುದು ತಪ್ಪೇನು ? ಇದರಿಂದ ಕಾಂಗ್ರೆಸ್ ಗೆ ಯಾವುದೇ ಹಿನ್ನೆಡೆಯಾಗಲ್ಲ ಎಂದರು.ಅಲ್ಲದೇ ಜಾತಿ ಜನಗಣತಿ ಬೇಕಾ ಬೇಡವಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಾತಿ ಜನಗಣತಿಯಿಂದ ಒಳ್ಳೆಯದಾಗುತ್ತಿದ್ದರೆ? ಒಳ್ಳೆಯದೂ ಆಗಬಹುದು. ನಾವು ನಿರೀಕ್ಷೆ ಮಾಡೋದು ಒಳ್ಳೆಯದಾಗಲಿ ಎಂದು. ಇದರಿಂದ ಹಾನಿಯಾಗುತ್ತಿದ್ದರೆ ಪೂರ್ವಾಲೋಚನೆ ಮಾಡಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದೇನಷ್ಟೆ ಎಂದರು.
ಇನ್ನು ಸಿಇಟಿ ಪರೀಕ್ಷೆ ಸಂದರ್ಭ ಜನಿವಾರ ತೆಗೆಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಜನಿವಾರ ತೆಗೆಯಿಸಿದ್ದು ಯಾರೇ ಮಾಡಿದರೂ ತಪ್ಪು. ಸರ್ಕಾರ ಅಂಥ ಯಾವುದೇ ಆದೇಶ ಮಾಡಿಲ್ಲ. ಮಾಡೋದೂ ಇಲ್ಲ. ಅದು ಯಾವುದೇ ಸರ್ಕಾರ ಇರಬಹುದು. ಹಾಗೆ ಮಾಡಲ್ಲ. ಬಹಳ ತಿಳುವಳಿಕೆ ಇಲ್ಲದ ಅಧಿಕಾರಿ ಮಾಡಿದ ತಪ್ಪಿಗೆ ಸಮಾಜ ತಲೆ ತಗ್ಗಿಸುವಂತಾಗಿದೆ. ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ. ಆ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಉನ್ನತ ಶಿಕ್ಷಣ ಸಚಿವರು ಸಹ ಹೇಳಿದ್ದಾರೆ. ಯಾವುದೇ ಜಾತಿಯವರಿಗೂ ಹಾಗೆ ಮಾಡಬಾರದು ಎಂದರು.