ಹೆಂಡತಿ ಜೊತೆ ಜಗಳ, ಬೀದಿಯಲ್ಲಿದ್ದ ಮಹಿಳೆ ಕೆಣಕಿ ಕಲ್ಲಲ್ಲಿ ಹೊಡೆಸಿಕೊಂಡು ಪ್ರಾಣಬಿಟ್ಟ!

ಚಿಕ್ಕಬಳ್ಳಾಪುರ: ಹೆಂಡತಿ ಜೊತೆ ಜಗಳ ಮಾಡಿಕೊಂಡು ರಾತ್ರಿ ಮನೆಯಿಂದ ಹೊರಗೆ ಬಂದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಮಲಗಿದ್ದವಳೊಂದಿಗೆ ಅಸಭ್ಯವಾಗಿ ವರ್ತಿಸಿ ಕಲ್ಲಿನೇಟು ತಿಂದು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಜೂನ್ 4 ರ ಬೆಳಗ್ಗೆ ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿರುವ ಆರ್.ಕೆ. ಕಾಂಪ್ಲೆಕ್ಸ್ ಕಟ್ಟಡದ ನೆಲಮಹಡಿಯಲ್ಲಿರುವ ಅಂಗಡಿ ಮುಂಭಾಗದಲ್ಲಿ ಯುವಕನ ಶವ ಪತ್ತೆಯಾಗಿದೆ. ರಕ್ತದ ಮಡಿವಿನಲ್ಲಿ ಬಿದ್ದಿದ್ದ ಶವದ ಮುಖವನ್ನ ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಸ್ಥಿತಿಯಲ್ಲಿತ್ತು.
ಏನಿದು ಘಟನೆ?: ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ನಗರ ಪೊಲೀಸರು ಶವದ ಗುರುತು ಪತ್ತೆ ಮಾಡಿದ್ದರು. ಕೊಲೆಯಾದ ಯುವಕ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ನಗರದ ನಿವಾಸಿ ಶ್ರೀಕಾಂತ್ (29), ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಆತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಜೂನ್ 3 ರಾತ್ರಿ 9:45ರಲ್ಲಿ ಮನೆಯೊಂದು ಹೊರಗೆ ಬಂದವರನ್ನು ವಾಪಸ್ ಮನೆಗೆ ಬಂದಿರಲಿಲ್ಲ. ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಾಯಿ ಮೀನಾಕ್ಷಿ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಕುಶಾಲ್ ಚೌಕ್ಸೆ ಆರೋಪಿಗಳನ್ನ ಶೀಘ್ರವೇ ಬಂಧಿಸುವುದ್ದಾಗಿ ಹೇಳಿದ್ದರು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನ ಪರಿಶೀಲನೆ ಮಾಡಿದ್ದಾಗ ಅದೇ ಸ್ಥಳದಲ್ಲಿ ಒಬ್ಬ ಪುರುಷ ಓರ್ವ ಮಹಿಳೆ ಜೊತೆಯಾಗಿ ಓಡಾಡುತ್ತಿರುವುದು ಸೆರೆಯಾಗಿತ್ತು. ದೃಶ್ಯದ ಆಧಾರದ ಮೇಲೆ ಇಬ್ಬರನ್ನ ವಿಚಾರಣೆ ನಡೆಸಿದ್ದರು,ಆಗ ಕೊಲೆ ಆರೋಪಿಗಳು ಪತ್ತೆಯಾಗಿದ್ದಾರೆ.
ಕೊಲೆ ಆರೋಪಿ ದೊಡ್ಡಬಳ್ಳಾಪುರ ತಾಲೂಕಿನ 32 ವರ್ಷದ ಖಾಸಗಿ ಬಸ್ ಕ್ಲೀನರ್ ನರಸಿಂಹಮೂರ್ತಿ ಅಲಿಯಾಸ್ ಕೆಂಪ ಎಂದು ತಿಳಿದು ಬಂದಿದ್ದು, ಆರೋಪಿಯನ್ನ ಬಂಧಿಸಿದ್ದು, ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ