
ಬೆಳಗಾವಿ: ನಮ್ಮ ಜೀವನದಲ್ಲಿ ಮಾದರಿ ವ್ಯಕ್ತಿಗಳು ಬೇಕು. ಶ್ರೀರಾಮ ಮತ್ತು ಶ್ರೀಕೃಷ್ಣನಂತವರ ವ್ಯಕ್ತಿತ್ವ ಅನುಸರಿಸುವುದರಿಂದ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಆಯೋಧ್ಯೆ ಶ್ರೀರಾಮ ಮಂದಿರ ಖಜಾಂಚಿ, ಗೀತಾ ಪರಿವಾರದ ಸಂಸ್ಥಾಪಕ ಗೋವಿಂದದೇವ ಗಿರೀಜಿ ಮಹಾರಾಜರು ಹೇಳಿದರು.
ಹಿಂದವಾಡಿಯ ಗುರುದೇವ ರಾನಡೆ ಮಂದಿರದ ಅಕಾಡೆಮಿ ಆಫ್ ಕಂಪೆರಿಟಿವ್ ಫಿಲಾಸಫಿ ಅಂಡ್ ರಿಲಿಜನ್‌ನ (ಎಸಿಪಿಆರ್) ಶತಮಾನೋತ್ಸವ ಅಂಗವಾಗಿ ಕೆಎಲ್‌ಇ ಸೆಂಟೇನರಿ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಿರುವ ‘ಶ್ರೀಕೃಷ್ಣ ನೀತಿ’ ವಿಷಯದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷ್ಣನ ವ್ಯಕ್ತಿತ್ವ ಪ್ರೇಮಮಯವಾಗಿದೆ. ಕೃಷ್ಣನು ಜನಸಾಮಾನ್ಯರಂತೆ ನಡವಳಿಕೆ ಹೊಂದಿದ್ದನು.
ಜನರ ಮಧ್ಯದಲ್ಲಿ ವಿಶ್ವಾಸ ಬೆಸೆವ ಕೆಲಸ ಮಾಡಿದರು. ಅವನ ಕಿರುನಗೆ ಜನರಿಗೆ ಸಂಜೀವಿನಿ ಆಗಿದೆ. ಜೀವಗಳನ್ನು ಬೆಸೆಯುವ ಕೆಲಸ ಮಾಡಿದ. ಈಗಿನ ಕಾಲಘಟ್ಟಕ್ಕೆ ಕೃಷ್ಣನ ವ್ಯಕ್ತಿತ್ವ ಮಾದರಿಯಾಗುತ್ತದೆ ಎಂದರು. ಎಸಿಪಿಆರ್ ಕಾರ್ಯದರ್ಶಿ ಮಾರುತಿ ಝಿರಲಿ ಮಾತನಾಡಿ, ಜಗತ್ತಿನ ಅತಿದೊಡ್ಡ ಗೀತಾ ಅಧ್ಯಯನ ವೇದಿಕೆಯಾದ ‘ಗೀತಾ ಪರಿವಾರ’ ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಸನಾತನ ಧರ್ಮ ಮತ್ತು ಭಾರತೀಯ ಪರಂಪರೆಯ ಜ್ಞಾನ ಹೊಂದಿದ್ದಾರೆ. ಅವರು ಆಗಮಿಸಿದ್ದು ಹೆಮ್ಮೆ ಸಂಗತಿ ಎಂದು ಹೇಳಿದರು.
ಚಿತ್‌ಪ್ರಕಾಶಾನಂದಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಕೆಎಲ್‌ಇ ಯುಎಸ್‌ಎಂ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ, ಮಾಜಿ ಶಾಸಕ ಅನಿಲ್ ಬೆನಕೆ, ಸುಬ್ರಹ್ಮಣ್ಯ ಭಟ್, ರಾಮಚಂದ್ರ ಜಕಾತಿ ಉಪಸ್ಥಿತರಿದ್ದರು.