Uncategorized

ಮಹಿಳೆಯರ ಸಾಧನೆಗೆ ಪುರುಷರು ಹೆಗಲು ಕೊಡುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್.

ಬೆಳಗಾವಿ: 50 ವರ್ಷಗಳ ಹಿಂದೆ ಮಹಿಳೆಯರನ್ನು ಪುರುಷರು ಮನೆಯಿಂದ ಹೊರಹೋಗಲು ಬಿಡುತ್ತಿರಲಿಲ್ಲ. ಆದರೆ, ಇಂದು ಮಹಿಳೆಯರ ಯಶಸ್ಸಿಗೆ ಪುರುಷರೇ ಹೆಗಲು ಕೊಡುತ್ತಿದ್ದಾರೆ. ಇಂಥ ಸಹಕಾರದಿಂದಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಆಯೋಜಿಸಲಾಗಿದ್ದ ‘ ಸುವರ್ಣ ಸಾಧಕಿ’ 2025 ರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮಹಿಳೆಯರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಕೂಡ ಒಂದು ಸಾಧನೆ ಎಂದು ಪ್ರಶಂಸಿಸಿದರು.

ಸಾಧನೆ ಮಾಡುವಾಗ ಮಹಿಳೆಯರು ಸಾಕಷ್ಟು ಆರೋಪಗಳನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಕಟ್ಟುಪಾಡುಗಳು ಎಷ್ಟಿವೆ ಅಂತ ಎಲ್ಲರಿಗೂ ಗೊತ್ತಿದೆ. ಅನಿಷ್ಟ ಪದ್ಧತಿಗಳು ಇನ್ನೂ ಕೆಲವೆಡೆ ನಡೆಯುತ್ತಿವೆ. ಈ ಮಧ್ಯೆ ವಿಶ್ವ ನೋಡುವ ಹಾಗೆ ಭಾರತೀಯ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮಹಿಳೆಯರಿಗೆ ಯಾವುದೇ ಜಾತಿ ಇಲ್ಲ, ಪಕ್ಷವಿಲ್ಲ. ಎಲ್ಲ ಮಹಿಳೆಯರ ಭಾವನೆ, ಮನಸ್ಸು ಒಂದೇ. ವಿಚಾರಧಾರೆ, ಸಿದ್ಧಾಂತ ಬೇರೆ ಇರಬಹುದು. ಆದರೆ ಕಷ್ಟ ಒಂದೇ ಎಂದರು.

ಮೊದಲು ರಾಜಕೀಯದಲ್ಲಿ ಮಹಿಳೆಯರಿಗೆ ಅವಕಾಶ ಇರಲಿಲ್ಲ. ಇದೀಗ ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲೂ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಸಿಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಜನಪ್ರತಿನಿಧಿಗಳನ್ನು ನಾವು ನೋಡಬಹುದು. ಯುಪಿಎ ಸರ್ಕಾರದಲ್ಲೇ ಮಹಿಳಾ ಮೀಸಲಾತಿ ತರಲು ಶ್ರೀಕಾರ ಹಾಡಲಾಗಿತ್ತು. ಆಗ ವಿರೋಧ ಪಕ್ಷಗಳು ಅವಕಾಶ ಕೊಟ್ಟಿರಲಿಲ್ಲ. ಈಗಿನ ಸರ್ಕಾರ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿದೆ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ತಗ್ಗಿ ಬಗ್ಗಿ ನಡೆದರೆ ಗೌರವ ಹೆಚ್ಚಾಗುತ್ತದೆ. ಸಾಕಷ್ಟು ಕಷ್ಟಗಳ ಮಧ್ಯೆ ಸಾಧನೆ ಮಾಡಿದ್ದೀರಿ, ಸಾಧನೆ ನಿರಂತರವಾಗಿ ನಡೆಯಬೇಕು. ಸಾಧನೆ ವೇಳೆ ಏಳು ಬೀಳು ಇರುತ್ತದೆ. ಧೈರ್ಯದಿಂದ ಮುನ್ನುಗ್ಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿವಿ ಮಾತು ಹೇಳಿದರು.

* ಕನ್ನಡ ಪ್ರಭ್ರ, ಸುವರ್ಣ ನ್ಯೂಸ್ ಕಾರ್ಯಕ್ಕೆ ಶ್ಲಾಘನೆ
ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರು ತಾವು ಬೆಳವಣಿಗೆ ಹೊಂದುವುದರ ಜೊತೆಗೆ ಬೇರೆಯವರ ಬೆಳವಣಿಗೆ ನೋಡಿ ಖುಷಿಪಡುತ್ತಾರೆ. ಬೇರೆಯವರ ಸಾಧನೆಯನ್ನು ಗುರುತಿಸುವುದೇ ಒಂದು ಸಾಧನೆ. ಈ ಕಾರ್ಯವನ್ನು ಅವರು ಮಾಡುತ್ತಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.

* ಅಂದು ನಾನು ನನ್ನ ಕ್ಷೇತ್ರ ಅಂದಿದ್ದೇ ತಪ್ಪಾಗಿತ್ತು..!
ಅಂದು ನಾನು…. ಇದೇ ವಿಟಿಯು ವೇದಿಕೆಯಲ್ಲಿ ಮಾತನಾಡುವಾಗ ನನ್ನ ಕ್ಷೇತ್ರ ಎಂದು ಹೇಳಿದ್ದೇ ತಪ್ಪಾಗಿತ್ತು. ಆದರೀಗ ಸಚಿವೆಯಾಗಿ ನಾನು ವಿಟಿಯು ಕ್ಯಾಂಪಸ್‌ಗೆ ಭೇಟಿ ಕೊಟ್ಟಿರುವೆ ಎಂದು ಸಚಿವರು ಹಿಂದಿನ ಘಟನೆಯೊಂದನ್ನು ಮೆಲುಕು ಹಾಕಿದರು.
2013ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತಿದ್ದೆ. ಅಂದು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರೊಂದಿಗೆ ನಾನು ಕೂಡ ವಿಟಿಯು ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಿದ್ದೆ. ದೇಶಪಾಂಡೆ ಅವರ ಒತ್ತಾಯದ ಮೇರೆಗೆ ನನಗೂ ಕೂಡ ವೇದಿಕೆಯಲ್ಲಿ ಮಾತನಾಡುವ ಅವಕಾಶ ಸಿಕ್ಕಿತು. ನಾನು ಭಾಷಣದ ವೇಳೆ ವಿಟಿಯು ಕ್ಯಾಂಪಸ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರಕ್ಕೆ ಎಲ್ಲರೂ ಬಂದಿರುವುದಕ್ಕೆ ಸಂತೋಷ ಎಂದಷ್ಟೇ ಹೇಳಿದೆ. ಇದಕ್ಕೆ ವೇದಿಕೆಯಲ್ಲಿದ್ದ ಅಂದಿನ ಶಾಸಕ ಸಂಜಯ್ ಪಾಟೀಲ್ ನನ್ನ ಕ್ಷೇತ್ರ ಅಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕ್ಷೇತ್ರದ ಶಾಸಕ ನಾನಿರುವಾಗ ನೀವು ನನ್ನ ಕ್ಷೇತ್ರ ಎನ್ನಬೇಡಿ ಎಂದಿದ್ದರು. ಇಂಥ ಅವಮಾನದ ನಡುವೆಯೂ ನಾನು ಒಂದು ಮಾತನಾಡದೇ ಸುಮ್ಮನಾಗಿದ್ದೆ. ಅಂದಿನಿಂದ ಇಂದಿನಿಂದವರೆಗೂ ನಾನು ಕ್ಯಾಂಪಸ್‌ಗೆ ಬಂದಿರಲಿಲ್ಲ. ಆದರೆ, ಇಂದು ಸಚಿವೆಯಾಗಿ ವೇದಿಕೆಗೆ ಬಂದಿರುವೆ. ಇದು ನನ್ನ ಸೊಕ್ಕಿನ ಮಾತಲ್ಲ. ನನ್ನ ಪಾಲಿಗೆ ಹೆಮ್ಮೆಯ ವಿಷಯ ಎಂದು ಸಚಿವರು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಚಾನೆಲ್ ನ ಪ್ರಧಾನ ಸಂಪಾದಕರಾದ ರವಿ ಹೆಗಡೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿದ್ಯಾಶಂಕರ ಎಸ್, ಬಾಗಲಕೋಟೆ ಜಿಲ್ಲಾಧಿಕಾರಿಗಳಾದ ಜಾನಕಿ ಕೆ.ಎಂ, ಭಾರತೀಯ, ಭಾರತ ಮಹಿಳಾ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್, ಸುವರ್ಣ ಸಾಧಕಿ ಪ್ರಶಸ್ತಿಗೆ ಭಾಜನರಾದ ಸಾಧಕಿಯರು, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನ ಎಲ್ಲ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button