ಹೆಲಿಕಾಪ್ಟರ್ ದುರಂತ; ಈರಣ್ಣ ಕಡಾಡಿ ಸೇರಿದಂತೆ ದೇಶದ ಎಂಟು ಸಂಸದರು, ಅವರ ಕುಟುಂಬಸ್ಥರು ಜಸ್ಟ್ ಮಿಸ್

ಹೆಲಿಕಾಪ್ಟರ್ ದುರಂತದಿಂದ ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ದೇಶದ ಎಂಟು ಸಂಸದರು, ಅವರ ಕುಟುಂಬಸ್ಥರು ಜಸ್ಟ್ ಮಿಸ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉತ್ತರಾಖಂಡದ ಕೇದಾರನಾಥ ಬಳಿ ನಿನ್ನೆ ಬೆಳಗ್ಗೆ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಪೈಲೆಟ್ ಸೇರಿ ಏಳು ಯಾತ್ರಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ.
ಸಂಸದರು ಮೊದಲ ಬ್ಯಾಚ್‌ನಲ್ಲಿ ಹೋಗುವ ಹೆಲಿಕಾಪ್ಟರ್ ಮೂಲಕ ಕೇದಾರನಾಥ್‌ಗೆ ತೆರಳಬೇಕಿತ್ತು.. ಡೆಹ್ರಾಡೂನ್‌ನಿಂದ ಕೆದಾರನಾಥಗೆ ತೆರಳಲು ಎಂಟು ಸಂಸದರಿಗೆ ನಿನ್ನೆ ಬೆಳಗ್ಗೆ 6 ಗಂಟೆಗೆ ಶೆಡ್ಯೂಲ್ ಫಿಕ್ಸ್ ಆಗಿತ್ತು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಪತ್ನಿ ಸುಮಿತ್ರಾ ಕಡಾಡಿ ಸೇರಿ 8 ಸಂಸದರು ತಮ್ಮ ಕುಟುಂಬಸ್ಥರೊಂದಿಗೆ ಪ್ರಯಾಣ ಬೆಳೆಸಬೇಕಿತ್ತು.. ಮಹಾರಾಷ್ಟ್ರ ರಾಜ್ಯದ ಮಾವಲ್ ಕ್ಷೇತ್ರದ ಶಿವಸೇನೆ ಸಂಸದ ಶ್ರೀರಂಗ ಅಪ್ಪಾ ಬಾರ್ನೆ ಹಾಗೂ ಅವರ ಪತ್ನಿ, ಉತ್ತರ ಪ್ರದೇಶದ ಆಲಿಘಡ ಕ್ಷೇತ್ರದ ಬಿಜೆಪಿ ಸಂಸದ ಸತೀಶ್ ಗೌತಂ ಹಾಗೂ ಅವರ ಪತ್ನಿ, ಮಹಾರಾಷ್ಟ್ರ ಧಾರಸಿಂಹ ಕ್ಷೇತ್ರದ ಶಿವಸೇನೆ ಸಂಸದ ಓಂಪ್ರಕಾಶ ನಿಂಬಾಳ್ಕರ್ ಹಾಗೂ ಪತ್ನಿ, ಉತ್ತರ ಪ್ರದೇಶದ ರಾಜ್ಯಸಭೆ ಸದಸ್ಯೆ ಸಂಗೀತಾ ಯಾದವ್ ಹಾಗೂ ಅವರ ಪತಿ ಇದೇ ಹೆಲಿಕಾಪ್ಟರ್ ಮೂಲಕ ಕೇದಾರನಾಥ್ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಇವರೆಲ್ಲರು ಹೆಲಿಪ್ಯಾಡ್ಗೆ ಬರೋದು ವಿಳಂಬ ಆಗಿದ್ದಕ್ಕೆ ಸಾಮಾನ್ಯ ಯಾತ್ರಾರ್ಥಿಗಳನ್ನು ಹೆಲಿಕಾಪ್ಟರ್ ಕರೆದೊಯ್ದಿತ್ತು. ಲೇಟ್ ಆಗಿ ಬಂದ ಹಿನ್ನೆಲೆಯಲ್ಲಿ ಇವರು, ಎರಡನೇ ಬ್ಯಾಚ್ ಕೊಂಡೊಯ್ಯುವ ಹೆಲಿಕಾಪ್ಟರ್ ಏರಿ ಕುಳಿತಿದ್ದರು. ಮಾಹಿತಿ ಪ್ರಕಾರ, ಈ ಹೆಲಿಕಾಪ್ಟರ್ ಟೇಕ್ ಆಫ್ ಕೂಡ ಆಗಿತ್ತು. ಆದರೆ ಮೊದಲ ಬ್ಯಾಚ್ನಲ್ಲಿ ಹೋಗಿದ್ದ ಹೆಲಿಕಾಪ್ಟರ್ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ವಾಪಸ್ ಲ್ಯಾಂಡಿಂಗ್ ಮಾಡಲಾಗಿದೆ. ತಕ್ಷಣವೇ ಲ್ಯಾಂಡ್ ಮಾಡಿದ ಪೈಲಟ್, ಎಲ್ಲರನ್ನೂ ಸುರಕ್ಷಿತವಾಗಿ ಹೆಲಿಪ್ಯಾಡ್ನಲ್ಲಿ ಕೆಳಗಿಳಿಸಿದ್ದಾರೆ.