ಬೆಂಗಳೂರು

ದುರ್ನಡತೆ ತೋರಿದ ಚಾಲಕ, ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

ಬೆಂಗಳೂರು: ಆಟೋ ಚಾಲಕನೊಬ್ಬ ಮದ್ಯ ಸೇವಿಸಿ ಅನ್ಯ ಮಾರ್ಗದಲ್ಲಿ ವಾಹನ ಚಲಾಯಿಸಿದ್ದಲ್ಲದೇ, ದುರ್ನಡತೆಗೆ ತೋರಿದ್ದಾನೆ ಎಂದು ಆರೋಪಿಸಲಾಗಿದ್ದು, ಚಾಲಕನ ವರ್ತನೆಯಿಂದ ಆತಂಕಗೊಂಡ ಮಹಿಳಾ ಪ್ರಯಾಣಿಕರೊಬ್ಬರು ಚಲಿಸುತ್ತಿದ್ದ ಆಟೋದಿಂದ ಜಿಗಿದು ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆಯು ಬೆಂಗಳೂರಿನಲ್ಲಿ ಗುರುವಾರ ರಾತ್ರಿ ನಡೆದಿದೆ. ಥಣಿಸಂದ್ರದ ನಿವಾಸಿಯಾಗಿರುವ ಮಹಿಳೆಯು ನಿನ್ನೆ ರಾತ್ರಿ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಮನೆಗೆ ಹೋಗಲು ಹೊರಮಾವಿನಿಂದ ಥಣಿಸಂದ್ರಕ್ಕೆ ನಮ್ಮ ಯಾತ್ರಿ ಆ್ಯಪ್​ನಲ್ಲಿ ಆಟೋ ಬುಕ್ ಮಾಡಿದ್ದರು. 8.55ರ ಸುಮಾರಿಗೆ ಪಿಕಪ್ ಲೋಕೆಷನ್​ಗೆ KA03 AM8956 ಆಟೋ ಬಂದಿತ್ತು.

ಚಾಲಕನಿಗೆ ಓಟಿಪಿ ಹೇಳಿ ಆಟೋ ಹತ್ತಿದ ಮಹಿಳೆಯನ್ನ ಥಣಿಸಂದ್ರಕ್ಕೆ ಡ್ರಾಪ್ ಮಾಡದೇ, ಚಾಲಕ ಹೆಬ್ಬಾಳ ಕಡೆ ಹೋಗುತ್ತಿದ್ದ. ಬೇರೆ ದಾರಿಯಲ್ಲಿ ಹೋಗುತ್ತಿರುವುದನ್ನ ಕಂಡು, ಚಾಲಕನಿಗೆ ಹೇಳಿದರೂ ಪ್ರತಿಕ್ರಿಯಿಸಲಿಲ್ಲ. ಬಳಿಕ ಆಟೋ ನಿಲ್ಲಿಸುವಂತೆ ಸೂಚಿಸಿದರೂ ಚಾಲನೆ ಮುಂದುವರೆಸಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆ ಚಲಿಸುತ್ತಿರುವಾಗಲೇ ಆಟೋದಿಂದ ಜಿಗಿದಿದ್ದಾರೆ ಎಂದು ಮಹಿಳೆಯ ಪತಿ ಅಜರ್ ಖಾನ್ ಆರೋಪಿಸಿದ್ದಾರೆ.

”ನಿನ್ನೆ ರಾತ್ರಿ ನನ್ನ ಹೆಂಡತಿ ಹೊರಮಾವಿನಿಂದ ಥಣಿಸಂದ್ರಕ್ಕೆ ಹೋಗಲು ನಮ್ಮಯಾತ್ರಿ ಆ್ಯಪ್ ಮೂಲಕ KA03 AM8956 ನಂಬರ್​​ನ ಆಟೋ ಬುಕ್ ಮಾಡಿದ್ದರು. ಆದರೆ, ಕುಡಿದ ಚಾಲಕ ತನ್ನ ಹೆಂಡತಿಯನ್ನ ಹೆಬ್ಬಾಳ ಕಡೆಗೆ ತಪ್ಪು ಸ್ಥಳಕ್ಕೆ ಕರೆದೊಯ್ದಿದ್ದಾನೆ. ಆತಂಕದಿಂದ ಪತ್ನಿಯು ಚಲಿಸುತ್ತಿರುವ ಆಟೋದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಅಜರ್ ಖಾನ್ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಮಾಹಿತಿ ಹಂಚಿಕೊಳ್ಳುವಂತೆ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button