
ಬೆಳಗಾವಿ : ಚರಂಡಿಯ ಕೊಳಚೆ ನೀರು ಮಿಶ್ರಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಹಿನ್ನೆಲೆ ಬೆಳಗಾವಿಯ ಚವ್ಹಾಟ ಗಲ್ಲಿಯ ರಹಿವಾಸಿಗಳು ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಎಲ್ ಆಂಡ್ ಟಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಬೆಳಗಾವಿಯ ಚವ್ಹಾಟ ಗಲ್ಲಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ನಿರಂತರವಾಗಿದೆ. 24 ಗಂಟೆಗಳ ಕಾಲ ನೀರು ಪೂರೈಸಲಾಗುವುದೆಂದು ಪೈಪ್’ಲೈನ್ ಅಳವಡಿಸಲಾಗಿದೆ. ಆದರೇ ಇಲ್ಲಿಯ ವರೆಗೂ 24 ಗಂಟೆಗಳ ಕಾಲ ನೀರು ಬಿಟ್ಟಿಲ್ಲ. ಅಲ್ಲದೇ ಮೀಟರ್ ಕೂಡ ಅಳವಡಿಕೆಯಾಗಿಲ್ಲ.
ಈಗ ಚರಂಡಿಯ ಕೊಳಚೆ ನೀರು ಮಿಶ್ರಣಗೊಂಡ ನೀರನ್ನು ಪೂರೈಸಲಾಗುತ್ತಿದೆ. ಇಂತಹ ಕಲುಷಿತ ನೀರನ್ನು ಕುಡಿದು ಇಲ್ಲಿನ ಚಿಕ್ಕ ಮಕ್ಕಳು ಮತ್ತು ವೃದ್ಧರು ಅನಾರೋಗ್ಯ ಕ್ಕಿಡಾಗುತ್ತಿದ್ದಾರೆ. ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದ ಕೂಡಲೇ, ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇಲ್ಲಿನ ರಹಿವಾಸಿಗಳು ಬೆಳಗಾವಿ ಮಹಾಣಗರ ಪಾಲಿಕೆಯೂ ಎಲ್.ಆಂಡ್.ಟಿಗೆ ಬೆಳಗಾವಿ ಜನರ ಸಮಸ್ಯೆಯನ್ನು ನೀಗಿಸುವ ಜವಾಬ್ದಾರಿ ನೀಡಿದೆಯೋ ಅಥವಾ ಸಮಸ್ಯೆ ಹೆಚ್ಚಿಸುವ ಜವಾಬ್ದಾರಿ ನೀಡಿದೆಯೋ ಎಂದು ಪ್ರಶ್ನಿಸುತ್ತಿದ್ದಾರೆ. ಕಳೆದ 2 ವರೆ ವರ್ಷದಿಂದ 24 ಗಂಟೆಗಳ ಕಾಲ ನೀರು ಪೂರೈಕೆಯ ಬಿಲ್ ತುಂಬಿಸಿಕೊಳ್ಳುತ್ತಾರೆ ಆದರೇ ಸಮರ್ಪಕ ನೀರು ಮಾತ್ರ ಪೂರೈಕೆಯಾಗುವುದಿಲ್ಲ ಎಂದು ಇಲ್ಲಿನ ರಹಿವಾಸಿ ಸ್ವಪ್ನೀಲ್ ಜೋಗಾಣಿ ದೂರಿದರು.
ಕೂಡಲೇ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಚವ್ಹಾಟ ಗಲ್ಲಿಯ ರಹಿವಾಸಿಗಳು ಆಗ್ರಹಿಸಿದ್ದಾರೆ.