ದಾವಣಗೆರೆ

ಯುವ ಜನತೆ ಸಜ್ಜಾಗಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ; ಸಿಎಂ ಕರೆ

ದಾವಣಗೆರೆ : ಕೆಲವರು ದೇಶದ ನೆಮ್ಮದಿ ಭಂಗವನ್ನುಂಟು ಮಾಡಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತವರಿಂದ ಯುವ ಜನತೆ ದೂರ ಉಳಿಯಿರಿ. ತಮ್ಮ ಬದುಕು, ಭವಿಷ್ಯ ಕಾಪಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.

ಇಂದು ದಾವಣಗೆರೆ ಜಿಲ್ಲಾಡಳಿತ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಜನತೆ ಸಮಾಜಮುಖಿಯಾಗಿ ಬೆಳೆದಾಗ ದೇಶದ ಆಸ್ತಿ ಆಗುತ್ತಾರೆ. ಇದಕ್ಕಾಗಿ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆದು ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಮಾಜದ ಪ್ರಗತಿಗೆ ಕಾರಣರಾಗಬೇಕು ಎಂದರು.

ನಾವು ದೇಶಕ್ಕೆ ಹೊರೆಯಾಗದೆ, ದೇಶಕ್ಕೆ ಸಂಪತ್ತಾಗಿ ಬೆಳೆಯಬೇಕು ಎನ್ನುವ ಸಂಕಲ್ಪದೊಂದಿಗೆ ಯುವ ಜನತೆ ಸಜ್ಜಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಿಎಂ ಕರೆ ನೀಡಿದರು.

ಸಂವಿಧಾನದ ಸಾರ ಪ್ರತಿಯೊಬ್ಬರಿಗೂ ಅರ್ಥ ಆಗಬೇಕು. ಪ್ರತೀ ಪ್ರಜೆಗೂ ಅರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರೆಯಬೇಕು. ಪ್ರತಿಯೊಬ್ಬರಿಗೂ ಅವರವರ ಧರ್ಮ ನಂಬಿಕೆಯ ಆಚರಣೆಗೆ ಅವಕಾಶ ಇರಬೇಕು ಎನ್ನುವುದೇ ಸಂವಿಧಾನದ ಸಾರ. ಈ ಸಂವಿಧಾನ ಇದ್ದುದರಿಂದಲೇ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಆದ್ದರಿಂದ ಈ ಸಂವಿಧಾನವನ್ನು ಕಾಪಾಡುವುದೇ ನಮ್ಮ ಜವಾಬ್ದಾರಿ ಎಂದು ಹೇಳಿದರು.

ದೇಶ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಟ್ಟೆವು ಎನ್ನುವುದೇ ನಮಗೆ ಮುಖ್ಯವಾಗಬೇಕು. ಅನೇಕ ದುಷ್ಟ ಶಕ್ತಿಗಳು ದೇಶದ ನೆಮ್ಮದಿ ಕೆಡಿಸಲು, ಪ್ರಗತಿ ಹಾಳು ಮಾಡಲು ಕೆಲವರು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ವಿಕೃತರಿಂದ ಯುವ ಜನತೆ ದೂರ ಉಳಿದು ಮನುಷತ್ವ ಬೆಳೆಸಿಕೊಂಡು, ಸಮಾಜಮುಖಿಯಾಗಿ ಬೆಳೆಯಬೇಕು. ಇದರಿಂದ ಪ್ರಜಾಪ್ರಭುತ್ವ ಉಳಿಸಿ, ಬೆಳೆಸಲು ಸಾಧ್ಯ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button