ಕಂಡೆಕ್ಟರ್ ಮೇಲಿನ ಹಲ್ಲೆ ನಡೆಸಿರುವುದು ಖಂಡನೀಯ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ತಾಲೂಕಿನ ಸಣ್ಣಬಾಳೇಕುಂದ್ರಿ ಗ್ರಾಮದಲ್ಲಿ ಕಂಡೆಕ್ಟರ್ ಮೇಲಿನ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಘಟನೆ ನಡೆದ ಹದಿನೈದು ನಿಮಿಷದಲ್ಲಿ ಡಿಸಿಪಿ ರೋಹನ್ ಜಗದೀಶ್ ಅವರಿಗೆ ಕರೆ ಮಾಡಿ ಸರಕಾರಿ ಸೇವೆ ಮಾಡುವ ಅಧಿಕಾರಿಗಳ ಮೇಲೆ ಯಾರೇ ಹಲ್ಲೆ ಮಾಡಿದರೂ ಕಠಿಣ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದೆ ಎಂದರು.
ನನ್ನ ಮತಕ್ಷೇತ್ರದಲ್ಲಿ ಭಾಷಾ ವಿವಾದ ಕಿತ್ತು ಹಾಕುತ್ತಿದ್ದೇವೆ. ನನಗೆ ಮರಾಠಿ ಮತಗಳು ಹೆಚ್ಚಾಗಿ ಬಂದಿದ್ದಾವೆ ಎಂದರೆ ಭಾಷಾ ವಿವಾದ ಇಲ್ಲ. ಯಾರೋ ಒಂದಿಬ್ಬರು ಕಿಡಿಗೇಡಿಗಳು ಮಾಡಿದ ತಪ್ಪಿಗೆ ಅಮಾಯಕರು ಬಲಿಯಾಗುತ್ತಿರುವುದು ದುರಂತ ಎಂದರು.
ಮಹಾರಾಷ್ಟ್ರದಲ್ಲಿ ಶಿವಸೇನೆಯವರು ಕರ್ನಾಟಕ ಸರಕಾರದ ಸಾರಿಗೆ ಬಸ್ ಗಳನ್ನು ಹಾಗೂ ಚಾಲಕರು, ನಿರ್ವಾಹಕರನ್ನು ಅವೇಹಳನ ರೀತಿಯಾಗಿ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ. ನಾವು ಒಂದೇ ದೇಶದ ಮಕ್ಕಳು. ಇದನ್ನು ಇಲ್ಲಿಗೆ ಬಿಡಬೇಕು ಎಂದು ಮನವಿ ಮಾಡಿದರು.
ಕಂಡೆಕ್ಟರ್ ಮೇಲೆ ಹಲ್ಲೆ ನಡೆದರೂ ಸ್ಥಳೀಯ ಪೊಲೀಸ್ ಅಧಿಕಾರಿಯ ಯಡವಟ್ಟಿನಿಂದ ಕಂಡೆಕ್ಟರ್ ಮೇಲೆ ಪೋಕ್ಸೊ ಕೇಸ್ ದಾಖಲು ಮಾಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಮಾರಿಹಾಳ ಸಿಪಿಐಯನ್ನು ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಕರವೇ ಕಾರ್ಯಕರ್ತರು ಮಂಗಳವಾರ ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಎಲ್ಲರಿಗೂ ಹೇಳುವುದು ಒಂದೇ ನಾವು ಒಂದೇ ದೇಶದ ಮಕ್ಕಳು ಇದನ್ನು ದಯಮಾಡಿ ಇಲ್ಲಿಗೆ ಬಿಟ್ಟು ಬಿಡಿ ಎಂದು ಮನವಿ ಮಾಡಿದರು.