ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ; ವಿವೇಚನೆ ಬಳಸಲಾಗಿಲ್ಲ ಎಂದ ಹೈಕೋರ್ಟ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಸಂಜ್ಞೆಯನ್ನು ಪರಿಗಣಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ವಿವೇಚನೆ ಬಳಸಲಾಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಪೋಕ್ಸೊ ಪ್ರಕರಣ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಬಿಜೆಪಿಯ ಹಿರಿಯ ನಾಯಕ ಬಿ. ಎಸ್ ಯಡಿಯೂರಪ್ಪ, ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ಅರುಣ ವೈ, ಎಂ. ರುದ್ರೇಶ ಮರಳುಸಿದ್ದಯ್ಯ ಮತ್ತು ಜಿ ಮರಿಸ್ವಾಮಿ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಯಡಿಯೂರಪ್ಪ ಪರವಾಗಿ ವಾದ ಮುಂದುವರಿಸಿದ ವಕೀಲರು, ಸತ್ಯ ಬಯಲು ಮಾಡಲು ತನಿಖೆ ನಡೆಸಲಾಗುತ್ತದೆ. ತನಿಖೆಯು ಪಕ್ಷಪಾತಿಯಾಗಿರಬಾರದು. ನ್ಯಾಯಯುತ ಮತ್ತು ಕಾನೂನಿನ ಅನ್ವಯ ನಡೆಯಬೇಕು ಎಂದರು.
ಅಲ್ಲದೆ, ಸಂಜ್ಞೆ ಪರಿಗಣಿಸುವ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯವು ತನಿಖಾಧಿಕಾರಿಯ ಅಭಿಪ್ರಾಯ ಒಪ್ಪಲಾಗದು. ಅಂತೆಯೇ ಪೊಲೀಸರು ಬಿ ವರದಿ ಸಲ್ಲಿಸಿದ ಪ್ರಕರಣಕ್ಕೂ ಇದು ಅನ್ವಯವಾಗುತ್ತದೆ. ತನಿಖಾಧಿಕಾರಿ ಸಾಕ್ಷಿ ಸಂಗ್ರಹಿಸಲಿದ್ದು, ಅವರು ಸಾಕ್ಷಿಯನ್ನು ಪ್ರತ್ಯೇಕಿಸಲಾಗದು. ಸಾಕ್ಷಿಯು ಒಪ್ಪಿತವೇ, ಇಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಪೀಠಕ್ಕೆ ಹೇಳಿದರು.