ಸಡಗರ ಸಂಭ್ರಮದ “ಸುಗ್ಗಿ ಕಾಲ” ಸುಗ್ಗಿಯಲ್ಲಿ ತೊಡಗಿದ ಅನ್ನದಾತ

ಬೆಳಗಾವಿ: ಈಗ ಸುಗ್ಗಿಯ ಕಾಲ ಆರಂಭಗೊಂಡಿದೆ. ಕಷ್ಟಪಟ್ಟು ಬೆಳೆದ ಫಸಲು ಈಗ ರೈತನ ಕೈ ಸೇರಿದೆ. ಅತಿ ಹೆಚ್ಚಾಗಿ ಬೆಳಗಾವಿ ನಗರ ಮತ್ತು ಪ್ರದೇಶದಲ್ಲಿ ಹೆಚ್ಚಾಗಿ ಭತ್ತವನ್ನು ಬೆಳೆಯಲಾಗುತ್ತದೆ. ಸಂಕ್ರಾಂತಿಯ ಮುನ್ನ ಸುಗ್ಗಿಯ ಸಂಭ್ರಮ ಈಗ ಎಲ್ಲೆಡೆ ಮನೆ ಮಾಡಿದೆ.
ಹೌದು, ಈಗ ಸುಗ್ಗಿ ಕಾಲ ಎಲ್ಲೆಡೆ ಭತ್ತದ ಕುಯ್ಲಿನ ಸಂಭ್ರಮ. ಸಂಕ್ರಾಂತಿಯ ಮುನ್ನ ರೈತರ ಸುಗ್ಗಿಯಲ್ಲಿ ತೊಡಗುತ್ತಾನೆ. ಬೆಳಗಾವಿ ನಗರ ಮತ್ತು ಪ್ರದೇಶದ ವಿವಿಧ ಗದ್ದೆಗಳಲ್ಲಿ ಭತ್ತದ ಕಟಾವು ಕಾರ್ಯ ಜೋರಾಗಿಯೇ ನಡೆದಿದೆ. ಭತ್ತದ ಗದ್ದೆಗಳಲ್ಲಿ ಸಾಂಪ್ರದಾಯಿಕ ಮತ್ತು ಯಂತ್ರಗಳ ಮೂಲಕ ಭತ್ತದ ಕಟಾವು ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಇನ್ನೂ ಯಂತ್ರೋಪಕರಣಗಳ ಉಪಯೋಗದ ಬದಲಾಗಿ ಸಾಂಪ್ರದಾಯಿಕವಾಗಿಯೇ ಕೃಷಿ ಕಾರ್ಯ ಮಾಡಲಾಗುತ್ತದೆ.
ಇನ್ನು ದೊಡ್ಡ ಪ್ರಮಾಣದ ಗದ್ದೆಗಳಲ್ಲಿ ಕೃಷಿ ಮಾಡುವ ರೈತರು ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಉಳುಮೆಯಿಂದ ಹಿಡಿದು ನಾಟಿ ಮಾಡುವುದು, ಕಟಾವು ಮಾಡುವುದು, ಹದಗೊಳಿಸುವುದು ಹೀಗೆ ಎಲ್ಲಾ ಕೆಲಸಗಳೂ ಯಂತ್ರಗಳ ಮೂಲಕವೇ ಆಗುತ್ತವೆ. ಯಂತ್ರೋಪಕರಣಗಳನ್ನು ಬಾಡಿಗೆಗೆ ತಂದು ಕೆಲಸ ಮಾಡಲಾಗುತ್ತದೆ. ರೈತ ಬೀಜವನ್ನು ಬಿತ್ತಿ ಫಸಲು ತೆಗೆದಾಗಲೇ ಆತನ ಕಾರ್ಯ ಪೂರ್ಣಗೊಳ್ಳುತ್ತದೆ.
ಸುಗ್ಗಿಯೂ ಆತನ ಶ್ರಮದ ಫಲವಾಗಿದೆ. ಈ ಸುಗ್ಗಿಯ ವೇಳೆ ಮನೆ ಮಂದಿಯೆಲ್ಲ ಸೇರಿಕೊಂಡು ಶ್ರಮ ವಹಿಸುತ್ತಾರೆ. ಹಲವರು ತಮ್ಮ ನೆಂಟರಿಷ್ಟರನ್ನು ಕೂಡ ಬರಮಾಡಿಕೊಳ್ಳುತ್ತಾರೆ. ಕೆಲವರು ಕೃಷಿ ಕಾರ್ಮಿಕರ ಮೊರೆ ಹೋಗುತ್ತಾರೆ. ಚಿಕ್ಕ ಮಕ್ಕಳಿಗೂ ಸಹ ಸುಗ್ಗಿಯ ಕಾಲ ಬಂತೆಂದರೇ ಖುಷಿಯೋ ಖುಷಿ. ದಾ.ರಾ. ಬಳೂರಗಿ ಅವರ ಸುಗ್ಗಿಯೂ ಬಂದಿತು ಹಿಗ್ಗನು ತಂದಿತು ಈ ಪದ್ಯ ಇಲ್ಲಿ ನೆನಪಾಗುತ್ತದೆ.