ತೊಗರಿ ಖರೀದಿಗೆ ರಾಜ್ಯ ಸರ್ಕಾರದಿಂದ ಸಿಕ್ತು ಹೆಚ್ಚುವರಿ ಬೆಂಬಲ ಬೆಲೆ;ಶಿವಾನಂದ ಪಾಟೀಲ್

ವಿಜಯಪುರ: ”ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ರಾಜ್ಯ ಸರ್ಕಾರ ಕ್ವಿಂಟಾಲ್‌ಗೆ ಹೆಚ್ಚುವರಿ 450 ರೂ. ನೀಡಲು ನಿರ್ಧರಿಸಿದೆ. ಈ ಉದ್ದೇಶಕ್ಕೆ 140 ಕೋಟಿ ರೂ. ಒದಗಿಸಲಾಗುವುದು” ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಘೋಷಿಸಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರೊಂದಿಗೆ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ ಸಚಿವರು, ”ಒಟ್ಟು ಪ್ರತಿ ಕ್ವಿಂಟಾಲ್‌ಗೆ 8 ಸಾವಿರ ರೂ. ಬೆಂಬಲ ಬೆಲೆ ನೀಡಲಾಗುವುದು” ಎಂದು ತಿಳಿಸಿದರು.
”ಕೇಂದ್ರ ಸರ್ಕಾರದ ನಫೆಡ್ ಖರೀದಿ ಏಜನ್ಸಿಯಾಗಿದ್ದು, ದಾಖಲೆಗಳನ್ನು ಸಕಾಲಕ್ಕೆ ಒದಗಿಸದ ಕಾರಣ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ರಾಜ್ಯಾದ್ಯಂತ 400ಕ್ಕೂ ಅಧಿಕ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ತೊಗರಿ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ” ಎಂದು ಹೇಳಿದರು.
”ಇದೇ ಮೊದಲ ಬಾರಿಗೆ 8,000 ರೂ. ಧಾರಣೆಯಲ್ಲಿ ತೊಗರಿ ಖರೀದಿ ಮಾಡಲಾಗುತ್ತಿದೆ. ಇದುವರೆಗೆ 5,800 ರೂ. ಧಾರಣೆಯಲ್ಲಿ ಖರೀದಿ ಮಾಡಲಾಗುತ್ತಿತ್ತು. ಬೀದರ್ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಯವರೆಗೆ ತೊಗರಿ ಬೆಳೆಯಲಾಗುತ್ತಿದ್ದು, ರೈತರು ಬೆಂಬಲ ಬೆಲೆ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ ಕ್ವಿಂಟಾಲ್‌ಗೆ 450 ರೂ. ಹೆಚ್ಚುವರಿ ಕೊಡುವ ನಿರ್ಧಾರ ಕೈಗೊಂಡಿದೆ” ಎಂದು ಸಚಿವರು ವಿವರಿಸಿದರು.