25 ಅಡಿ ಎತ್ತರದ ಮಹಾತ್ಮ ಗಾಂಧೀಜಿ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.

ಬೆಳಗಾವಿ: ಸುವರ್ಣ ವಿಧಾನಸೌಧ ಉತ್ತರಪ್ರವೇಶ ದ್ವಾರದಲ್ಲಿ 25 ಅಡಿ ಎತ್ತರದ ಮಹಾತ್ಮ ಗಾಂಧೀಜಿ ಕಂಚಿನ ಪ್ರತಿಮೆಯನ್ನು ಚರಕ ತಿರುಗಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು. ಪ್ರತಿಮೆ ಉದ್ಘಾಟನೆ ಆಗುತ್ತಿದ್ದಂತೆ ಸೌಧದ ಮುಂಭಾಗದಲ್ಲಿ ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಲಾಯಿತು.
ಮಹಿಳಾ ಸಬಲೀಕರಣದ ಪ್ರತಿಪಾದನೆ: ಸಿಎಂ ಸಿದ್ದರಾಮಯ್ಯ ಮಾತನಾಡಿ, “ಮಹಾತ್ಮ ಗಾಂಧೀಜಿಯವರು ಅಂದು ಅಸ್ಪೃಶ್ಯತೆ ನಿವಾರಣೆ, ಸಮಾನತೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಕುರಿತು ಪ್ರತಿಪಾದನೆ ಮಾಡಿದ್ದರು. ಗಾಂಧೀಜಿಯವರು ಸದಾ ಶ್ರೀರಾಮನ ಸ್ಮರಣೆಮಾಡುತ್ತಿದ್ದರು. ಅವರು ಅಪ್ಪಟ ಹಿಂದೂ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಅವರು ಎಂದೂ ಹಿಂದೂ ವಿರೋಧಿಯಾಗಿರಲಿಲ್ಲ. ಆದರೆ, ಹಿಂದೂ ಧರ್ಮದಲ್ಲಿ ಸಮಾನತೆ ಮತ್ತು ಸಹೋದರತೆಯನ್ನು ಬಯಸಿದ್ದರು. “ಹೇ ರಾಮ್” ಎನ್ನುತ್ತಲೇ ಕೊನೆಯುಸಿರೆಳೆದರು. ಆದರೆ, ಅವರನ್ನು ಬಿಜೆಪಿಯವರು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ, ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ ಸಂವಿಧಾನ ವಿರೋಧಿ-ಅಂಬೇಡ್ಕರ್ ದ್ವೇಷಿಯೂ ಆಗಿದೆ” ಎಂದು ವಾಗ್ದಾಳಿ ನಡೆಸಿದರು.
ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಗಾಂಧೀಜಿಯವರ ಪ್ರತಿಮೆ ಸ್ಥಾಪನೆಯಿಂದ ಈ ಭಾಗಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಗೌರವ ತಂದಿದೆ. ಸಂವಿಧಾನ ಹಾಗೂ ಪ್ರಜಾತಂತ್ರ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು. ಗಾಂಧೀಜಿಯವರು ದೇಶಕ್ಕೆ ನೀಡಿದ ಕೊಡುಗೆಯನ್ನು ಈಗ ಎಲ್ಲರೂ ಸ್ಮರಿಸುತ್ತಿದ್ದಾರೆ. ಗಾಂಧೀಜಿಯವರು ತಮ್ಮ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಅಧಿವೇಶನದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಕರೆ ನೀಡಿದ್ದರು. ಆದ್ದರಿಂದ ಈ ನೆಲವು ಐತಿಹಾಸಿಕ ಮಹತ್ವ ಹೊಂದಿದೆ” ಎಂದರು.1924ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳದಲ್ಲಿಯೇ ನೂರು ವರ್ಷದ ಬಳಿಕ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಿರುವುದು ಅತ್ಯಂತ ಮಹತ್ವದ್ದಾಗಿದೆ. ಕಲಬುರಗಿಯಲ್ಲೂ ಕೂಡ ಮಹಾತ್ಮ ಗಾಂಧೀಜಿಯವರ ವಿಶೇಷ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದೆ. ಯಾಕೆಂದರೆ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಬೆಳಗಾವಿಯಲ್ಲಿ ಮಾತ್ರ. ಅಂತಹ ಮಹಾತ್ಮನ ಪ್ರತಿಮೆಯ ಉದ್ಘಾಟನೆ ನನ್ನ ಕೈಯಿಂದ ಆಗಿದ್ದಕ್ಕೆ ನನ್ನ ಜೀವನ ಧನ್ಯವಾಯಿತು” ಎಂದು ಹೇಳಿದರು.
ಸ್ವಾತಂತ್ರ್ಯ ಯೋಧರಿಗೆ ಗೌರವಿಸುವ ಕಾರ್ಯಕ್ರಮ: ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ , “ಇದೊಂದು ಐತಿಹಾಸಿಕ ಕಾರ್ಯಕ್ರಮ. ಇದು ಕೇವಲ ಪ್ರತಿಮೆ ಅನಾವರಣ ಕಾರ್ಯಕ್ರಮ ಮಾತ್ರವಲ್ಲ. ಸ್ವಾತಂತ್ರ್ಯ ಯೋಧರಿಗೆ ಗೌರವಿಸುವ ಮತ್ತು ಸಂವಿಧಾನದ ಘನತೆ ಎತ್ತಿ ಹಿಡಿಯುವ ಪವಿತ್ರ ಕಾರ್ಯಕ್ರಮವಾಗಿದೆ. ರಾಮರಾಜ್ಯ ಮತ್ತು ಗ್ರಾಮರಾಜ್ಯ ಗಾಂಧೀಜಿಯವರ ಕನಸಾಗಿತ್ತು” ಎಂದು ಹೇಳಿದರು.